ದಿಡೀರನೆ ಪವರ್ ಟಿವಿ ತನ್ನ ಪ್ರಸಾರವನ್ನು ಸ್ಥಗಿತಗೊಳಿಸಿದ್ದೇಕೆ..?

Soma shekhar
ರಾಕೇಶ್ ಶೆಟ್ಟಿ ಎಂಬುವರ ಒಡೆತನದ ಪವರ್ ಟಿವಿ ಹೆಸರಿನ ಖಾಸಗಿ ಸುದ್ದಿ ವಾಹಿನಿ ಮೇಲೆ ಕೋರ್ಟ್‌ ಸರ್ಚ್ ವಾರಂಟ್ ಮೇರೆಗೆ ಸಿಸಿಬಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್‌ನಿಂದ ಸರ್ಚ್ ವಾರಂಟ್ ಪಡೆದಿರುವ ಪೊಲೀಸರು ಮತ್ತಿಕೆರೆ ರಸ್ತೆಯ ಖಾಸಗಿ ಸುದ್ದಿ ವಾಹಿನಿ ಕಚೇರಿಯಲ್ಲಿ ತಲಾಷು ನಡೆಸಿದ್ದಾರೆ.


ಇದರೊಂದಿಗೆ ಸುದ್ದಿವಾಹಿನಿಯ ಪ್ರಿನ್ಸಿಪಲ್ ಎಡಿಟರ್ ಹಸಿಬೂರ್ ರಹನಮಾನ್ ಅವರನ್ನು ಕೂಡ ವಿಚಾರಣೆಗೆ ಸಿಸಿಬಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಜೊತೆಗೆ ಸುದ್ದಿವಾಹಿಯ ಲೈವ್ ಪ್ರಸಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸುದ್ದಿ ವಾಹಿನಿಯ ಸಿಬ್ಬಂದಿ ಆರೋಪಿಸಿದ್ದಾರೆ.


ನಮ್ಮ ವಾಹಿನಿಯ ಫೇಸ್‌ಬುಕ್‌ ಲೈವ್‌ನ್ನು ಕೂಡ ಪೊಲೀಸರು ಸ್ಥಗಿತಗೊಳಿಸಿದ್ದಾರೆ. ನಮ್ಮ ಚಾನಲ್‌ನ್ನು ನಂಬಿಕೊಂಡು ಇದ್ದಂತಹ ಸುಮಾರು 250 ಜನ ಕೆಲಸಗಾರರು ಬೀದಿಗೆ ಬಂದಿದ್ದೇವೆ ಎಂದು ಪ್ರಿನ್ಸಿಪಲ್ ಎಡಿಟರ್ ರಹಮಾನ್ ಹಸೀಬ್ ಅವರು ತಮ್ಮ ಖಾತೆಯ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.


ತಲಾಷು ಮಾಡುವ ಸಂದರ್ಭದಲ್ಲಿ ಸಿಗುವ ಡಿಜಿಟಲ್ ಅಥವಾ ಬೇರೆ ಯಾವುದೇ ದಾಖಲೆಗಳನ್ನು ತಕ್ಷಣ ಸಲ್ಲಿಸುವಂತೆ ಒಂದೆನೇ ಎಸಿಎಂಎಂ ಕೋಟ್ ಸರ್ಚ್ ವಾರಂಟ್‌ನಲ್ಲಿ ಸೂಚಿಸಿದೆ. ಪೊಲೀಸರ ಹುಡುಕಾಟ ಮುಂದುವರೆದಿದೆ ಎಂದು ಖಾಸಗಿ ಸುದ್ದಿವಾಹಿನಿಯ ಸಿಬ್ಬಂದಿ ಆರೋಪಿಸಿದ್ದಾರೆ.


ಇದರೊಂದಿಗೆ ವಾಹಿನಿ ಪ್ರಸಾರ ಮಾಡಿದ್ದ ಸುದ್ದಿಗಳ ಸರ್ವರನ್ನು ಪೊಲೀಸರು ವಶಪಡಿಸಿಕೊಂಡಿದ್ದರಿಂದ ಲೈವ್ ಟೆಲಿಕಾಸ್ಟ್ ಸ್ಥಗಿತವಾಗಿದೆ ಎಂದೂ ವಾಹಿನಿಯ ಆಯಂಕರ್ ಒಬ್ಬರು ಆರೋಪಿಸಿದ್ದಾರೆ. ಮೆ. ರಾಮಲಿಂಗಮ್ ಕನ್ಸ್ಟ್ರಕ್ಷನ್ ಕಂಪನಿ ಪ್ರೈವೆಟ್ ಲಿಮಿಟೆಡ್‌ನ ಡೈರೆಕ್ಷರ್ ಚಂದ್ರಕಾಂತ್ ರಾಮಲಿಂಗಮ್ ಎಂಬುವರು ಕೊಟ್ಟಿರುವ ದೂರಿನ ಅನ್ವಯ ಎಸಿಎಂಎಂ ನ್ಯಾಯಾಲಯ ಸರ್ಚ್‌ ವಾರೆಂಟ್ ಕೊಟ್ಟಿದೆ. ಖಾಸಗಿ ವಾಹಿನಿಯ ಎಂಡಿ ರಾಕೇಶ್ ಶೆಟ್ಟಿ ಎಂಬುವರು ಹಣಕಾಸು ವ್ಯವಹಾರದಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಾಗಿದೆ.ಕಾರ್ಯನಿರತ ಪತ್ರಕರ್ತರ ಸಂಘದ ಖಂಡನೆ: ಸಿಎಂ ಪುತ್ರ ವಿಜಯೇಂದ್ರ ರವರ ಭ್ರಷ್ಟಚಾರ ವನ್ನು ಪ್ರಸಾರ ಮಾಡಿದ ಕಾರಣಕ್ಕಾಗಿ ಪವರ್ ಟಿ ವಿ ಯ ವ್ಯವಸ್ಥಾಪಕ ನಿರ್ದೇಶಕರ ಮನೆಯ ಮೇಲೆ ಸರ್ಚ್ ವಾರಂಟ್ ಇಲ್ಲದೆ ಏಕಾ ಏಕಿ ಪೋಲಿಸರ ದಾಳಿ ನಡೆಸಿರುವ ಕ್ರಮವನ್ನು ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸುತ್ತದೆ ಎಂದು ಕಾ.ನಿ.ಪ. ಅಧ್ಯಕ್ಷ ಎಸ್ ಸೋಮಶೇಖರ ಗಾಂಧಿ ಅವರು ಹೇಳಿದ್ದಾರೆ.

Find Out More:

Related Articles: