ಚೀನಾದ ಹೀನ ಕೃತ್ಯಕ್ಕೆ ಭಾರತ ವ್ಯಾಪರಿ ಸಂಘಗಳ ಒಕ್ಕೂಟ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ..?

Soma shekhar

ಕೊರೋನಾ ವೈರಸ್ ಇಂದಾಗಿ ಭಾರತ ಈಗಾಗಲೇ ನಲುಗಿ ಹೋಗಿರುವಾಗ ಜೊತೆಗೆ ಚೀನಾ ಭಾರತದ ಗಡಿಯಾದ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಕಾಲು ಕೆರೆದು ಜಗಳವನ್ನು ಮಾಡುತ್ತಿದೆ. ಇದಕ್ಕೆ ಪ್ರತೀಕಾರ ಎಂಬಂತೆ  ಪ್ರಧಾನಿ ಮೋದಿ ವಿದೇಶಿ ವಸ್ತುಗಳ ಬಳಕೆಯನ್ನು ನಿಲ್ಲಿಸುವಂತೆ ಪರೋಕ್ಷವಾಗಿ ಕರೆಯನ್ನು ನೀಡಿದ್ದರು. ಇದಕ್ಕೆ ಪೂರಕವಾಗಿ ವ್ಯಾಪರಿಗಳ ಸಂಘವೂ ಕೂಡ ಚೀನೀ ವಸ್ತುಗಳನ್ನು ಬಹಿಷ್ಕರಿಸುವಂತೆ ನಿರ್ಧಾರವನ್ನು ಮಾಡಿದೆ.

 

ಹೌದು, ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಿ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆಗಳ ಹಿನ್ನೆಲೆಯಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ)ವು ಚೀನಿ ಸರಕುಗಳ ಬಹಿಷ್ಕಾರಕ್ಕೆ ಕರೆ ನೀಡಿದೆ. ತನ್ನ 'ಭಾರತೀಯ ಸಾಮಾನ್-ಹಮಾರಾ ಅಭಿಮಾನ್' ಅಭಿಯಾನದಡಿ ಚೀನಿ ಉತ್ಪನ್ನಗಳನ್ನು ಅನುಮೋದಿಸುವುದನ್ನು ನಿಲ್ಲಿಸುವಂತೆ ಅದು ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಎಂ.ಎಸ್.ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಸೇರಿದಂತೆ ಸೆಲೆಬ್ರಿಟಿಗಳನ್ನು ಕೋರಿ ಬಹಿರಂಗ ಪತ್ರವನ್ನು ಬರೆದಿದೆ.

 

ಏಳು ಕೋಟಿ ವ್ಯಾಪಾರಿಗಳು ಮತ್ತು 40,000 ವ್ಯಾಪಾರಿಗಳ ಸಂಘಗಳನ್ನು ಪ್ರತಿನಿಧಿಸುತ್ತಿರುವ ಸಿಎಐಟಿ ಬಹಿಷ್ಕರಿಸಬಹುದಾದ ಚೀನಿ ಉತ್ಪನ್ನಗಳ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದೆ. ತನ್ನ ಅಭಿಯಾನದ ಅಂಗವಾಗಿ ಅದು ಚೀನಿ ಸರಕುಗಳನ್ನು ಮಾರಾಟ ಮಾಡದಂತೆ ವ್ಯಾಪಾರಿಗಳನ್ನು ಪ್ರೇರೇಪಿಸುವುದು ಮಾತ್ರವಲ್ಲ,ದೇಶಿಯ ಉತ್ಪನ್ನಗಳನ್ನೇ ಖರೀದಿಸುವಂತೆ ಬಳಕೆದಾರರನ್ನೂ ಆಗ್ರಹಿಸಲಿದೆ.

 

ಸರಕಾರವೂ ಚೀನಿ ಉತ್ಪನ್ನಗಳ ವಿರುದ್ಧ ನಿಲುವು ತಳೆದಿರುವಂತಿದೆ. ಸುರಕ್ಷತೆಯ ದೃಷ್ಟಿಯಿಂದ ತನ್ನ 4ಜಿ ಜಾಲದ ಉನ್ನತೀಕರಣಕ್ಕೆ ಚೀನಿ ಉಪಕರಣಗಳನ್ನು ಬಳಸದಂತೆ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ದೂರ ಸಂಪರ್ಕ ಇಲಾಖೆಯು ಸೂಚಿಸಲಿದೆ ಎಂದು ಸರಕಾರಿ ಮೂಲಗಳು ಬುಧವಾರ ತಿಳಿಸಿದ್ದವು. ಈ ನಿಟ್ಟಿನಲ್ಲಿ ಟೆಂಡರ್ ಅನ್ನು ಮರುರೂಪಿಸಲೂ ಇಲಾಖೆಯು ನಿರ್ಧರಿಸಿದೆ. ಚೀನಿ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತೆ ಖಾಸಗಿ ಟೆಲಿಕಾಂ ಕಂಪನಿಗಳಿಗೂ ಸೂಚಿಸಲು ಸರಕಾರವು ಯೋಚಿಸುತ್ತಿದೆ ಎಂದು ಈ ಮೂಲಗಳು ಹೇಳಿದ್ದವು.

 

ಚೀನಾದ ವಿರುದ್ಧ ಪ್ರತಿಭಟನೆಗಳ ನಡುವೆಯೇ ಆ ದೇಶದ ಮೊಬೈಲ್ ಫೋನ್ ತಯಾರಿಕೆ ಕಂಪನಿ ಒಪ್ಪೊ ಭಾರತದಲ್ಲಿ ತನ್ನ ಮುಂಚೂಣಿಯ 5ಜಿ ಸ್ಮಾರ್ಟ್‌ಫೋನ್‌ನ ಬಿಡುಗಡೆಯನ್ನು ರದ್ದುಗೊಳಿಸಿದೆ. ಆದರೆ ದೇಶದ ಅತ್ಯಂತ ದೊಡ್ಡ ಸಗಟು ಮಾರುಕಟ್ಟೆಯಾಗಿರುವ ದಿಲ್ಲಿಯ ಸದರ್ ಬಝಾರ್‌ನ ವ್ಯಾಪಾರಿಗಳು ಬಹಿಷ್ಕೃತ ಉತ್ಪನ್ನಗಳ ಬದಲು ಯಾವುದನ್ನು ಮಾರಾಟ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ಹೊರತಾಗಿಯೂ ಹೆಚ್ಚಿನ ಅಬಕಾರಿ ಸುಂಕಗಳು ಮತ್ತು ವಿಳಂಬ ನೀತಿ ಸ್ಥಳೀಯ ತಯಾರಿಕೆ ಕ್ಷೇತ್ರದ ಬೆಳವಣಿಗೆಯನ್ನು ಮೊಟಕುಗೊಳಿಸಿರುವುದನ್ನು ಅವರು ಬೆಟ್ಟು ಮಾಡಿದ್ದಾರೆ.

 

'ಚೀನಿ ಉತ್ಪನ್ನಗಳಿಗೆ ವಿದಾಯ ಹೇಳಲು ನಾವೂ ಬಯಸಿದ್ದೇವೆ. ಹೋಳಿ ಸಂದರ್ಭದಲ್ಲಿ ಹಲವಾರು ಚೀನಿ ಉತ್ಪನ್ನಗಳನ್ನು ನಾವು ಬಹಿಷ್ಕರಿಸಿದ್ದೆವು. ಆದರೆ ಅದನ್ನು ದೊಡ್ಡ ಪ್ರಮಾಣದಲ್ಲಿ ಮಾಡುವುದು ಕಷ್ಟ. ಸರಕಾರವು ಅಬಕಾರಿ ಸುಂಕಗಳನ್ನು ತಗ್ಗಿಸುವ,ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸುವ ಮತ್ತು ವಿಳಂಬ ನೀತಿಯನ್ನು ನಿವಾರಿಸುವ ಅಗತ್ಯವಿದೆ 'ಎಂದು ಮಾರುಕಟ್ಟೆಯ ವ್ಯಾಪಾರಿಗಳ ಸಂಘವು ಹೇಳಿದೆ.

 

Find Out More:

Related Articles: