ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ ತಿಳಿಸಿದ ಮಾರ್ಗ ಸೂಚಿ ಏನು..?
ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ರಾಜ್ಯದಲ್ಲಿ ನಡೆುತ್ತಿರುವ ಮೊಟ್ಟ ಮೊದಲ ಉಪಚುನಾವಣೆ ಇದಾಗಿದ್ದು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ. ಅಭ್ಯರ್ಥಿಗಳ ಬೆಂಬಲಿಗರು ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸುವಂತೆ ಇಲ್ಲದಿದ್ದರೇ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಆಯೋಗ ಎಚ್ಚರಿಸಿದೆ.
ಉಪ ಚುನಾವಣೆ ರ್ಯಾಲಿಯಲ್ಲಿ ಕೇವಲ 500 ಮಂದಿ ಮಾತ್ರ ಭಾಗವಹಿಸಲು ಅವಕಾಶ ನೀಡಿರುವುದಾಗಿ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಈ ಮಾರ್ಗ ಸೂಚಿ ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.
ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಸ್ಥಳವನ್ನು ನಿರ್ಧರಿಸಿದರೇ ಅಂತಹ ಕ್ಷೇತ್ರಗಳಲ್ಲಿ ಸಾರ್ವಜನಿಕ ಭಾಷಣಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ,ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸುವವರು ಅಧಿಕಾರಿಗಳು ಬರೆದ ವೃತ್ತದಲ್ಲಿ ನಿಂತು ಕೊಳ್ಳಬೇಕು, ರ್ಯಾಲಿಯಲ್ಲಿ 50ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಬೇರೆ ಚುನಾವಣೆಗಳ ರೀತಿಯಲ್ಲಿ ಈ ಚುನಾವಣೆಯಲ್ಲಿಯೂ ವಿಡಿಯೋ ಗ್ರಾಪರ್ ಗಳಿದ್ದು, ಅವರು ರ್ಯಾಲಿಯ ಎಲ್ಲಾ ಚಿತ್ರಣವನ್ನು ದಾಖಲಿಸುತ್ತಾರೆ, ಒಂದು ವೇಳೆ ನೀತಿ ಸಂಹಿತೆ ಉಲ್ಲಂಘನೆ ಮತ್ತು ಸುರಕ್ಷತಾ ಕ್ರಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ವಿಡಿಯೋ ಮೂಲಕ ದಾಖಲೆಳನ್ನು ಪಡೆದು ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ, ಫೇಸ್ ಮಾಸ್ಕ್, ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್, ಕೈಗವಸು ಮತ್ತು ಪಿಪಿಇ ಕಿಟ್ ಕಡ್ಡಾಯವಾಗಿದೆ.
ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನ್, ಕೈಗವಸು ಮುಂತಾದ ಅಗತ್ಯ ಸಲಕರಣೆಗಳನ್ನು ಆಯೋಗವೇ ಮತದಾರರಿಗೆ ಮತ್ತು ಸಿಬ್ಬಂದಿಗೆ ನೀಡುತ್ತದೆ.