ಐಪಿಎಲ್ ನಲ್ಲಿ ಆಡುವ ಆಟಗಾರರಿಗೆ ಬಿಸಿಸಿಐ ನೀಡಿದ ಶುಭಸುದ್ಧಿ ಏನು ಗೊತ್ತಾ,,?
ಅರಬ್ ದೇಶದಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಸಕಲ ಸಿದ್ಧತೆಗಳನ್ನು ನಡೆಸುತ್ತಿರುವ ಬಿಸಿಸಿಐ, ಎಲ್ಲ 8 ತಂಡಗಳ ಆಟಗಾರರ ಪತ್ನಿ-ಮಕ್ಕಳು ಮತ್ತು ಗೆಳತಿಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಯುಎಇಯಲ್ಲಿ ಕರೊನಾ ಮುಕ್ತವಾಗಿ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವ ಸಲುವಾಗಿ ಬಿಸಿಸಿಐ, 16 ಪುಟಗಳ ಮಾರ್ಗಸೂಚಿಯನ್ನು ಫ್ರಾಂಚೈಸಿಗಳಿಗೆ ನೀಡಿದೆ. ಇದರಲ್ಲಿ ಆಟಗಾರರು ಮತ್ತು ಸಿಬ್ಬಂದಿಗೆ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಅವಕಾಶ ಕಲ್ಪಿಸಲಾಗಿದೆ.
ಈ ಮುನ್ನ ಆಟಗಾರರ ಪತ್ನಿ-ಗೆಳತಿಯರಿಗೆ (ವ್ಯಾಗ್ಸ್) ಅವಕಾಶ ನೀಡುವುದನ್ನು ತಂಡಗಳ ವಿವೇಚನೆಗೆ ಬಿಟ್ಟುಬಿಡಲು ಬಯಸಿದ್ದ ಬಿಸಿಸಿಐ, ಮಾರ್ಗಸೂಚಿಯಲ್ಲಿ ಸ್ವತಃ ತಾನೇ ಕುಟುಂಬ ಸದಸ್ಯರಿಗೆ ಅವಕಾಶ ನೀಡುವುದಾಗಿ ತಿಳಿಸಿದೆ. 53 ದಿನಗಳ ಕಾಲ ನಡೆಯುವ ಟೂರ್ನಿ ವೇಳೆ ಕುಟುಂಬ ಸದಸ್ಯರಿಂದ ಸಂಪೂರ್ಣವಾಗಿ ದೂರ ಉಳಿದರೆ ಆಟಗಾರರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಬಹುದು ಎಂಬ ಭೀತಿ ಇದಕ್ಕೆ ಕಾರಣವಾಗಿದೆ. ಆದರೆ ಪತ್ನಿ-ಗೆಳತಿಯರು ತಂಡದ ಜತೆಗೆ ಬಸ್‌ನಲ್ಲಿ ಪ್ರಯಾಣಿಸುವಂತಿಲ್ಲ ಮತ್ತು ಜೈವಿಕ-ಸುರಕ್ಷಾ ನಿಯಮ ಉಲ್ಲಂಸುವಂತಿಲ್ಲ ಎಂದು ತಿಳಿಸಲಾಗಿದೆ. ಉಳಿದಂತೆ ಐಸಿಸಿ ಈ ಹಿಂದೆ ಬಿಡುಗಡೆ ಮಾಡಿದ್ದ ಮಾರ್ಗಸೂಚಿಗಳನ್ನೇ ಮುಂದುವರಿಸಲಾಗಿದೆ.
ಆಟಗಾರರ ಕುಟುಂಬ ಸದಸ್ಯರು ಕೂಡ ಜೈವಿಕ-ಸುರಕ್ಷಾ ವಾತಾವರಣದ ಕರೊನಾ ಪರೀಕ್ಷಾ ನಿಯಮಗಳಿಗೆ ಒಳಪಡಬೇಕಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅವರು ಕೂಡ ಜೈವಿಕ-ಸುರಕ್ಷಾ ವಾತಾವರಣದ ಹೊರಗಿನವರನ್ನು ಭೇಟಿಯಾಗುವಂತಿಲ್ಲ. ಆಹಾರ ಮತ್ತು ಪಾನೀಯಗಳನ್ನೂ ಹಂಚಿಕೊಳ್ಳುವಂತಿಲ್ಲ. ಪಂದ್ಯದ ವೇಳೆ ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಪ್ರದೇಶಕ್ಕೆ ಪತ್ನಿ-ಮಕ್ಕಳು, ಗೆಳತಿಯರಿಗೆ ಅವಕಾಶ ಇರುವುದಿಲ್ಲ.
ಇನ್ನು ಆಟಗಾರರು, ಸಿಬ್ಬಂದಿಯ ಕುಟುಂಬ ಸದಸ್ಯರು ಜೈವಿಕ-ಸುರಕ್ಷಾ ವಾತಾವರಣದ ನಿಯಮ ಉಲ್ಲಂಘಿಸಿದರೆ, 7 ದಿನಗಳ ಕ್ವಾರಂಟೈನ್‌ಗೆ ಒಳಪಡುವುದು ಕಡ್ಡಾಯವಾಗಿರುತ್ತದೆ. 6,7ನೇ ದಿನಗಳಲ್ಲಿ ನೆಗೆಟಿವ್ ವರದಿ ಬಂದರಷ್ಟೇ ಅವರಿಗೂ ಮತ್ತೆ ಜೈವಿಕ-ಸುರಕ್ಷಾ ವಾತಾವರಣದೊಳಗೆ ಪ್ರವೇಶ ದೊರೆಯಲಿದೆ.
ಒಂದು ಪಾಸಿಟಿವ್ ಬಂದರೂ ಐಪಿಎಲ್ಗೆ ಸಂಕಷ್ಟ
ಯುಎಇಯಲ್ಲಿ ಐಪಿಎಲ್ ಆಯೋಜಿಸುವ ವೇಳೆ ಒಂದೂ ಕರೊನಾ ಪಾಸಿಟಿವ್ ವರದಿ ಬರದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಯಾಕೆಂದರೆ ಒಬ್ಬ ಆಟಗಾರ ಪಾಸಿಟಿವ್ ವರದಿ ಬಂದರೂ, ಟೂರ್ನಿಗೆ ಸಂಕಷ್ಟ ಎದುರಾಗಲಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ-ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.