ಹ್ಯಾಮಿಲ್ಟನ್: ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ಅನ್ನು 5-0 ಅಂತರದಲ್ಲಿ ವೈಟ್ ವಾಷ್ ಮಾಡಿದ್ದು, ಮುಂಬರುವ ಐಪಿಎಲ್ ಟೂರ್ನಿ ಮೂಲಕ ಇದೇ ವರ್ಷ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ನಮ್ದೆ ಎಂದಿದ್ದಾರೆ ಚೇಸಿಂಗ್ ಕಿಂಗ್ ಕ್ಯಾಪ್ಟನ್ ವಿರಾಟ್ ಕೊಹ್ಲಿ. ಟಿ-20 ವಿಶ್ವಕಪ್ ಗೆಲ್ಲಲು ಇರುವ ಮಾಸ್ಟರ್ ಪ್ಲಾನ್ ಆದರೂ ಏನ್ ಗೊತ್ತಾ!?
ಆಸ್ಟ್ರೇಲಿಯಾ ಆತಿಥ್ಯದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುವ ಉದ್ದೇಶದಿಂದ ಎಲ್ಲಾ ತಂಡಗಳು ಹೆಚ್ಚು ಹೆಚ್ಚು ದ್ವಿಪಕ್ಷೀಯ ಟಿ20 ಸರಣಿಗಳನ್ನಾಡುತ್ತಿವೆ. ಆದರೆ, ವಿಶ್ವಕಪ್ಗೆ ತಮ್ಮದೇ ವಿಭಿನ್ನ ಯೋಜನೆಯನ್ನು ಹೊಂದಿರುವುದಾಗಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತ ತಂಡ ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಟಿ20ಸರಣಿಯಲ್ಲಿ 3-0ಅಂತರದ ವೈಟ್ ವಾಷ್ ಗೆಲುವು ದಾಖಲಿಸಿದ್ದು, ಇತ್ತೀಚೆಗಷ್ಟೇ ಆತಿಥೇಯ ನ್ಯೂಜಿಲೆಂಡ್ ವಿರುದ್ಧ 5-0ಅಂತರದಲ್ಲಿ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇದೀಗ ಕಿವೀಸ್ ಎದುರು ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನಾಡಲಿದ್ದು, ಫೆ.5ರಂದು ಇಲ್ಲಿನ ಸೆಡಾನ್ ಪಾರ್ಕ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದೆ.
ಇದರ ಬಗ್ಗೆ ಮಾತನಾಡಿದ ಕ್ಯಾಪ್ಟನ್ ಕೊಹ್ಲಿ, ಭಾರತ ತಂಡ ಟಿ20 ಕ್ರಿಕೆಟ್ ವಿಶ್ವಕಪ್ಗೆ ಐಪಿಎಲ್ 2020 ಮೂಲಕ ಸಜ್ಜಾಗಲಿದೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಆಡುವ ಪ್ರತಿಯೊಂದು ಮಾದರಿಯನ್ನೂ ಗೌರವಿಸಬೇಕು. 50 ಓವರ್ಗಳ ಪಂದ್ಯಕ್ಕೆ ಯಾವ ರೀತಿ ಆಡಬೇಕು ಅದರಂತೇ ಆಡಬೇಕು. ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿರುವುದು ಮುಂದಿನ ದಿನಗಳಲ್ಲಿ ಹೆಚ್ಚು ಟಿ20 ಆಡುವ ಅವಕಾಶವಿಲ್ಲ ಎಂದಲ್ಲ. ಐಪಿಎಲ್ ಟೂರ್ನಿ ನಡೆಯಲಿದ್ದು ವಿಶ್ವಕಪ್ ಗೆ ಈ ಮೂಲಕ ಸಜ್ಜಾಗಲಿದ್ದೇವೆ, ಕಪ್ ನಮ್ದೆ" ಎಂದಿದ್ದಾರೆ.
"ಐ.ಪಿ.ಎಲ್ ಅತ್ಯಂತ ಸ್ಪರ್ಧಾತ್ಮಕ ಟೂರ್ನಿಯಾಗಿದ್ದು, ಸಂಪೂರ್ಣ ಶ್ರಮವಹಿಸುವ ಅಗತ್ಯವಿರುತ್ತದೆ. ಅದಕ್ಕೆ ಬೇಕಾದ ಮನಸ್ಥಿತಿಯನ್ನೂ ಹೊಂದಬೇಕಾಗುತ್ತದೆ. ಆದರೆ 50 ಓವರ್ಗಳ ಕ್ರಿಕೆಟ್ ವಿಭಿನ್ನ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಒಡಿಐ ಸರಣಿಯನ್ನು ಯಾವುದೇ ಕಾರಣಕ್ಕೂ ಟಿ20 ವಿಶ್ವಕಪ್ ಗೆ ಪೂರ್ವ ಸಿದ್ಧತೆಯಾಗಿ ಪರಿಗಣಿಸುವುದಿಲ್ಲ. ಅಗತ್ಯಕ್ಕೆ ತಕ್ಕ ಆಟವಾಡಲಿದ್ದೇವೆ," ಎಂದಿದ್ದಾರೆ ಕಿಂಗ್ ಕೊಹ್ಲಿ.