ಎಸ್ ಪಿ ಗ್ರೂಪ್ ಟಾಟಾ ಗ್ರೂಪ್ಸ್ ನಿಂದ ಬೇರೆಯಾಗುವುದಕ್ಕೆ ಕಾರಣ ಏನು..?

Soma shekhar
ಭಾರತದ ಕಾರ್ಪೊರೇಟ್ ಇತಿಹಾಸದ ಅತಿ ದೊಡ್ಡ ಬೇರ್ಪಡೆಗೆ ವೇದಿಕೆ ಸಿದ್ಧವಾಗಿದೆ. ಶಾಪೂರ್ ಜೀ ಪಲ್ಲೋನ್ ಜೀ ಸಮೂಹವು ಟಾಟಾ ಸನ್ಸ್ ನಿಂದ ಬೇರೆ ಆಗುವುದಾಗಿ ಸುಪ್ರೀಂ ಕೋರ್ಟ್ ಗೆ ಮಂಗಳವಾರ ತಿಳಿಸಿದೆ. ಆದಷ್ಟು ಬೇಗ ನ್ಯಾಯಸಮ್ಮತವಾದ ಹಾಗೂ ಒಮ್ಮತವಾದ ಪರಿಹಾರದೊಂದಿಗೆ ಈ ಪ್ರತ್ಯೇಕತೆ ನಡೆಯಲಿದೆ ಎಂದು ತಿಳಿಸಲಾಗಿದೆ. ಈ ಎರಡು ದೊಡ್ಡ ಸಮೂಹಗಳ ಮಧ್ಯದ ಬಾಂಧವ್ಯ ಎಪ್ಪತ್ತು ವರ್ಷದ್ದು. ಅದು ಇನ್ನೇನು ಕೊನೆಯಾಗಲಿದೆ.





ಶಾಪೂರ್ ಜೀ ಪಲ್ಲೋನ್ ಜೀ ಸಮೂಹವನ್ನು ಎಸ್ ಪಿ ಗ್ರೂಪ್ ಅಂತಲೇ ಕರೆಯಲಾಗುತ್ತದೆ. ಟಾಟಾ ಸನ್ಸ್ ನಲ್ಲಿ ಅದಕ್ಕೆ 18.5% ಪಾಲಿದೆ. ಈಗ ಟಾಟಾ ಸಮೂಹದಿಂದ ಬೇರ್ಪಡೆ ಆಗುವ ಬಗ್ಗೆ ನೀಡಿರುವ ಹೇಳಿಕೆಯಲ್ಲಿ, ಟಾಟಾ ಸಮೂಹದಿಂದ ಬೇರೆ ಆಗುವುದು ಅಗತ್ಯ. ಏಕೆಂದರೆ ನಿರಂತರವಾದ ವ್ಯಾಜ್ಯಗಳಿಂದ ಬದುಕುಗಳು ಹಾಗೂ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.






"ಈಗಿನ ಸ್ಥಿರ ಹಾಗೂ ಚರಾಸ್ತಿಗಳು, ಗುಡ್ ವಿಲ್, ಪೇಟೆಂಟ್ ಎಲ್ಲವನ್ನೂ ಮೌಲ್ಯ ಮಾಡಿ, ನ್ಯಾಯಸಮತವಾಗಿ ಹಾಗೂ ಒಮ್ಮತದ ಪರಿಹಾರವನ್ನು ಶೀಘ್ರವಾಗಿ ಕಂಡುಕೊಂಡುಕೊಳ್ಳುವುದು ಮುಖ್ಯವಾಗಿತ್ತು," ಎಂದು ಹೇಳಲಾಗಿದೆ. ಶಾಪೂರ್ ಗ್ರೂಪ್ ಹಾಗೂ ಟಾಟಾ ಮಧ್ಯದ ಬಾಂಧವ್ಯ ಎಪ್ಪತ್ತು ವರ್ಷದ್ದು. ಪರಸ್ಪರ ವಿಶ್ವಾಸ, ಉತ್ತಮ ನಂಬಿಕೆ ಮತ್ತು ಸ್ನೇಹದೊಂದಿಗೆ ಅದು ಒಗ್ಗೂಡಿತ್ತು. ಈ ಬೇರ್ಪಡೆಯೊಂದಿಗೆ ಸಮೂಹದ ಎಲ್ಲ ಭಾಗೀದಾರರ ಹಿತಾಸಕ್ತಿಯೂ ಕಾಪಾಡಿದಂತಾಗುತ್ತದೆ ಎಂದು ಮಿಸ್ತ್ರಿ ಕುಟುಂಬ ಭಾರವಾದ ಹೃದಯದಿಂದ ನಂಬುತ್ತದೆ," ಎನ್ನಲಾಗಿದೆ.






 ಎಸ್ ಪಿ ಸಮೂಹದ ಬಳಿಯ ಷೇರಿನ ಪಾಲನ್ನು ಖರೀದಿ ಮಾಡುವುದಾಗಿ ಟಾಟಾ ಸಮೂಹವು ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಬಂದಿದೆ. ಮಿಸ್ತ್ರಿ ಸಮೂಹದ ಬಳಿ ಇರುವ ಟಾಟಾ ಸನ್ಸ್ ಪಾಲನ್ನು ಅಡ ಇಡುವುದಾಗಲೀ ಅಥವಾ ಮಾರುವುದಾಗಲೀ ಮಾಡುವಂತಿಲ್ಲ. ಮುಂದಿನ ವಿಚಾರಣೆ ಇರುವ ಅಕ್ಟೋಬರ್ 28ರ ತನಕ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಅಂತಿಮ ವಾದವನ್ನು ಅಂದಿನಿಂದ ಆಲಿಸಲು ಸುಪ್ರೀಂ ಕೋರ್ಟ್ ಆರಂಭಿಸುತ್ತದೆ.





ಕೊರೊನಾ ಬಿಕ್ಕಟ್ಟಿನ ಮಧ್ಯೆ ಮಿಸ್ತ್ರಿ ಕುಟುಂಬವು ವೈಯಕ್ತಿಕ ಆಸ್ತಿಗಳನ್ನು ಭದ್ರತೆಯಾಗಿ ನೀಡಿ, ಹಣ ಸಂಗ್ರಹಿಸುವ ಯತ್ನದಲ್ಲಿದೆ. ಕಂಪೆನಿಯ ಅರವತ್ತು ಸಾವಿರ ಸಿಬ್ಬಂದಿ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ವಲಸಿಗ ಕಾರ್ಮಿಕರ ಬದುಕು ಉಳಿಸಲು ಈ ನಡೆಗೆ ಕಂಪೆನಿ ಮುಂದಾಗಿದೆ. ಆದರೆ ಹಣ ಸಂಗ್ರಹಕ್ಕೆ ಟಾಟಾ ಸನ್ಸ್ ಅಡ್ಡಗಾಲಾಗಿದೆ. ಈಗ ಷೇರಿನ ಪಾಲನ್ನು ಅಡಮಾನ ಮಾಡುವುದಕ್ಕೋ ಅಥವಾ ಮಾರುವುದಕ್ಕೋ ಸುಪ್ರೀಂ ಕೋರ್ಟ್ ತಡೆ ಬಂದಿರುವುದು ಎಸ್ ಪಿ ಗ್ರೂಪ್ ಗೆ ಹಿನ್ನಡೆ ಆಗಿದೆ. ಈಗಿನ ಸ್ಥಿತಿಯಲ್ಲಿ ಮಿಸ್ತ್ರಿ ಕುಟುಂಬವು ಭೂತ, ಭವಿಷ್ಯತ್ ಹಾಗೂ ವರ್ತಮಾನಗಳ ಬಗ್ಗೆ ಆಲೋಚನೆ ಮಾಡಬೇಕಿದೆ. ಟಾಟಾ ಸನ್ಸ್ ನ ಈ ಹಿಂದಿನ ನಡೆ ಹಾಗೂ ಈಗಿನ ಪ್ರಯತ್ನಗಳಿಂದ ಎಸ್ ಪಿ ಸಮೂಹಕ್ಕೆ ಅಂತಿಮ ತೀರ್ಮಾನಕ್ಕೆ ಬರಲೇಬೇಕು ಎಂಬಂತೆ ಮಾಡಿದೆ. ಇನ್ನು ಟಾಟಾ ಗ್ರೂಪ್ ಹಾಗೂ ಎಸ್ ಪಿ ಸಮೂಹ ಎರಡೂ ಒಟ್ಟಿಗೆ ಇರುವುದು ಅಸಾಧ್ಯ ಎಂಬಂತೆ ಆಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Find Out More:

Related Articles: