ಈ ಬಾರಿಯ ಐಪಿಎಲ್ ಪಂದ್ಯಾವಳಿ ಯಾವ ದೇಶದಲ್ಲಿ ನಡೆಯಲಿದೆ ಗೊತ್ತಾ..?
ಹೌದು ಶ್ರೀಮಂತ ಟಿ20 ಟೂರ್ನಿ ಐಪಿಎಲ್ 13ನೇ ಆವೃತ್ತಿಯನ್ನು ಅರಬ್ ರಾಷ್ಟ್ರ ಯುಎಇಯಲ್ಲಿ ಆಯೋಜಿಸಲು ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಅನುಮತಿ ಲಭಿಸಿದೆ ಎಂದು ಬಿಸಿಸಿಐ ಶುಕ್ರವಾರ ತಿಳಿಸಿದೆ. ಜತೆಗೆ, ಟೂರ್ನಿ ಸ್ಥಳಾಂತರಕ್ಕೆ ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಲಿಖಿತ ಅನುಮತಿಯೂ ಕೈಸೇರಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
'ಯುಎಇಯಲ್ಲಿ ಟೂರ್ನಿ ನಡೆಸಲು ನಮಗೆ ಈಗಾಗಲೆ ಪ್ರಾಥಮಿಕವಾದ ಅನುಮತಿ ದೊರೆತಿದೆ. ಶೀಘ್ರದಲ್ಲೇ ಲಿಖಿತ ರೂಪದ ಅನುಮತಿಯೂ ನಮ್ಮ ಕೈಸೇರುವ ನಿರೀಕ್ಷೆ ಇದೆ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫ್ರಾಂಚೈಸಿಗಳಿಂದ ಕ್ವಾರಂಟೈನ್ ಪ್ರಕ್ರಿಯೆ ಶುರು: ಯುಎಇಯಲ್ಲಿ ಆಡುವ ಸಲುವಾಗಿ ಎಲ್ಲ 8 ಫ್ರಾಂಚೈಸಿಗಳು ಆಟಗಾರರು ಮತ್ತು ಸಿಬ್ಬಂದಿ ವರ್ಗದ ಕ್ವಾರಂಟೈನ್ ಮತ್ತು ಕೋವಿಡ್-19 ಪರೀಕ್ಷಾ ಪ್ರಕ್ರಿಯೆಗೆ ಚಾಲನೆ ನೀಡಿವೆ. ಮುಂಬೈ ಇಂಡಿಯನ್ಸ್ ತಂಡ ಈಗಾಗಲೆ ಮುಂಬೈ ಆಟಗಾರರ ಕ್ವಾರಂಟೈನ್ ಆರಂಭಿಸಿದೆ ಎನ್ನಲಾಗಿದೆ.
ಐಪಿಎಲ್ ತಂಡಗಳು ಯುಎಇಗೆ ಪ್ರಯಾಣಿಸುವುದಕ್ಕೆ ಮುನ್ನ ದೆಹಲಿ, ಮುಂಬೈ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಶಿಬಿರ ಸೇರುವ ನಿರೀಕ್ಷೆ ಇದ್ದು, ಅದಕ್ಕೆ ಮುನ್ನ ಕೆಲ ಆಟಗಾರರಿಗೆ ಅವರ ನಗರದಲ್ಲೇ ಕೋವಿಡ್-19 ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ. ಯುಎಇಗೆ ಪ್ರಯಾಣಿಸುವುದಕ್ಕೆ ಮುನ್ನ ಆಟಗಾರರು ಮತ್ತು ಸಿಬ್ಬಂದಿ ವರ್ಗ 24 ಗಂಟೆಗಳ ಅಂತರದಲ್ಲಿ ತಲಾ 2 ನೆಗೆಟಿವ್ ವರದಿಗಳನ್ನು ಪಡೆದುಕೊಳ್ಳಬೇಕಾಗಿದೆ. ಕೆಲ ್ರಾಂಚೈಸಿಗಳು ಆಟಗಾರರಿಗೆ ಒಟ್ಟು 4 ಬಾರಿ ಪರೀಕ್ಷೆ ನಡೆಸಲಿವೆ ಎನ್ನಲಾಗಿದೆ.
ಪ್ರತಿ ತಂಡಕ್ಕೆ ಗರಿಷ್ಠ 24 ಆಟಗಾರರನ್ನು ಯುಎಇಗೆ ಕರೆದೊಯ್ಯಲು ಅವಕಾಶ ನೀಡಲಾಗಿದೆ. ಆದರೆ ಸಿಬ್ಬಂದಿ ವರ್ಗದ ಮೇಲೆ ಮಿತಿ ಹೇರಲಾಗಿಲ್ಲ. ಕೆಲ ಫ್ರಾಂಚೈಸಿಗಳು 60 ವರ್ಷ ಮೇಲ್ಪಟ್ಟ ಸಿಬ್ಬಂದಿ ಹೊಂದಿವೆ. ಯುಎಇಗೆ ತೆರಳಿದ ಬಳಿಕ ಎಲ್ಲರಿಗೂ 6 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದ್ದು, 3 ನೆಗೆಟಿವ್ ವರದಿ ಪಡೆದವರಿಗೆ ಜೈವಿಕ-ಸುರಕ್ಷಾ ವಾತಾವರಣದೊಳಗೆ ಪ್ರವೇಶ ದೊರೆಯಲಿದೆ. ಬಳಿಕ 53 ದಿನಗಳ ಟೂರ್ನಿಯಲ್ಲಿ ಪ್ರತಿ 5 ದಿನಕ್ಕೊಮ್ಮೆ ಕರೊನಾ ಪರೀಕ್ಷೆ ನಡೆಯಲಿದೆ.