ಗಲ್ಫ ರಾಷ್ಟ್ರಗಳಿಂದ ಭಾರತೀಯರನ್ನು ಕರೆಸಿಕೊಳ್ಳವ ಬಗ್ಗೆ ಸುಪ್ರಿಂ ಕೋರ್ಟ್ ಹೇಳಿದ್ದೇನು..?
ಹೌದು ಗಲ್ಫ್ ರಾಷ್ಟ್ರಗಳಲ್ಲಿ ಪಾಸ್‌ಪೋರ್ಟ್ ಕಳೆದುಕೊಂಡ ಭಾರತೀಯ ಕಾರ್ಮಿಕರನ್ನು ಹಿಂದೆ ಕರೆ ತರಲು ವ್ಯವಸ್ಥೆ ರೂಪಿಸಲು ನಿರ್ದೇಶಿಸುವಂತೆ ಹಾಗೂ ಅವರ ಕಲ್ಯಾಣಕ್ಕೆ ನಿಯಮ ರೂಪಿಸಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರಕಾರ, ಸಿಬಿಐ ಹಾಗೂ 12 ರಾಜ್ಯಗಳ ಪ್ರತಿಕ್ರಿಯೆ ಕೋರಿದೆ.
ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸೂರ್ಯ ಕಾಂತ್ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ಮೂವರು ಸದಸ್ಯರ ನ್ಯಾಯಪೀಠ ಗೃಹ ಸಚಿವಾಲಯ, ಸಿಬಿಐ ಹಾಗೂ ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮಬಂಗಾಳ, ಒಡಿಶಾ, ಉತ್ತರಪ್ರದೇಶ, ಬಿಹಾರ ಹಾಗೂ ಇತರ ರಾಜ್ಯಗಳಿಗೆ ನೋಟಿಸು ಜಾರಿ ಮಾಡಿದೆ. ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಶ್ರವಣ್ ಕುಮಾರ್, ಹಲವು ಪ್ರಕರಣಗಳಲ್ಲಿ ಭಾರತೀಯ ರಾಯಭಾರಿ ಕಚೇರಿ ಪೂರ್ವಭಾವಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೂ ಕಾರ್ಮಿಕರನ್ನು ಹಿಂದೆ ಕರೆದುಕೊಂಡು ಬರಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು. ಉದ್ಯೋಗದ ಹಿನ್ನೆಲೆಯಲ್ಲಿ ಇತರ ದೇಶಗಳಿಗೆ ಭೇಟಿ ನೀಡಿದ ಸಂದರ್ಭ ಏಜೆಂಟರು ಹಾಗೂ ಉದ್ಯೋಗದಾತರಿಂದ ವಂಚನೆಗೊಳಗಾಗುವ ಭಾರತೀಯ ನಾಗರಿಕರಿಗೆ ನೆರವು ನೀಡಲು ಮಾರ್ಗಸೂಚಿ ರಚಿಸುವಂತೆ ಕೋರಿ ಗಲ್ಫ್ ತೆಲಂಗಾಣ ಕಲ್ಯಾಣ ಹಾಗೂ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಬಸಂತ ರೆಡ್ಡಿ ಪಟ್ಕುರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಗಲ್ಫ್ ದೇಶಗಳಿಂದ ಭಾರತದ ಪ್ರಜೆಗಳ ಮೃತದೇಹ ತರಲು, ಗಲ್ಫ್ ರಾಷ್ಟ್ರಗಳಲ್ಲಿ ಬಲವಂತದ ಕಾರ್ಮಿಕರಾಗಿರುವವರು ಹಾಗೂ ತಮ್ಮ ಪಾಸ್‌ಪೋರ್ಟ್ ಕಳೆದುಕೊಂಡವರನ್ನು ಹಿಂದೆ ಕರೆದುಕೊಂಡು ಬರಲು ನಿರ್ದೇಶನ ನೀಡುವಂತೆ ಕೂಡ ಮನವಿ ಕೋರಿದೆ. ''ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಏಜೆಂಟರು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಿ ಕಾರ್ಮಿಕರನ್ನು ಪ್ರಯಾಣಿಕರ ವೀಸಾದಲ್ಲಿ ವಿದೇಶಗಳಿಗೆ ಕಳುಹಿಸುತ್ತಿದ್ದಾರೆ. ಆದರೆ, ಅಲ್ಲಿಗೆ ತಲುಪಿದ ಮೇಲೆ, ಕಾರ್ಮಿಕರನ್ನು ಒಂದೋ ಹಿಂದೆ ಕಳುಹಿಸಲಾಗುತ್ತದೆ ಅಥವಾ ಸ್ಥಳೀಯ ಏಜೆಂಟರಿಗೆ ಹಸ್ತಾಂತರಿಸಲಾಗುತ್ತದೆ. ಆದುದರಿಂದ ಸರಕಾರದಲ್ಲಿ ಎಲ್ಲ ಭಾರತೀಯ ಕಾರ್ಮಿಕರ ವಿವರಗಳು ಇಲ್ಲ'' ಎಂದು ಮನವಿ ಹೇಳಿದೆ.