ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಿಗರಿಗೆ ಸಿಗಲಿದೆ ಗುಡ್ ನ್ಯೂಸ್..!!

Soma shekhar
ಕನ್ನಡದ ಎಲ್ಲ ನಿಘಂಟುಗಳು ಹಾಗೂ ಪದಕೋಶಗಳು ಒಂದೇ ಡಿಜಿಟಲ್‌ ವೇದಿಕೆಯಲ್ಲಿ ದೊರೆಯುವ ಹಾಗೂ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಇಂಗ್ಲಿಷ್‌ಗೆ ಪರ್ಯಾಯ ಕನ್ನಡ ಪದ ಬಳಸುವಂತೆ ಪ್ರೇರೇಪಿಸುವ ಉದ್ದೇಶದ ಪದ ಕಣಜ ಹಾಗೂ ದೇಸೀಕರಣ ಯೋಜನೆಯನ್ನು ಕರ್ನಾಟಕ ರಾಜ್ಯೋತ್ಸವದ ಹೊತ್ತಿಗೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ.





ಡಿಜಿಟಲ್‌ ಕ್ರಾಂತಿಯ ಯುಗದಲ್ಲಿ ಶಾಸ್ತ್ರೀಯ ಭಾಷೆ ಹಿರಿಮೆಯ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ರೂಪುಗೊಂಡ ಪದ ಕಣಜ ಹಾಗೂ ದೇಸೀಕರಣ ಯೋಜನೆಯ ಕಾರ್ಯ ಪ್ರಗತಿಯಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಗಳಲ್ಲಿ ಒಂದಾಗಿರುವ ಕನ್ನಡದಲ್ಲಿ ಸಾಕಷ್ಟು ಪದ ಭಂಡಾರವಿದೆ. ಹಾಗಿದ್ದರೂ ಪೂರ್ಣ ಪ್ರಮಾಣದ ಕನ್ನಡ ಬಳಕೆಗೆ ಪದಗಳ ಕೊರತೆ ಕಾಣುತ್ತಿದೆ. ದಿನ ಕಳೆದಂತೆ ಕನ್ನಡ ಬಳಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣವಿರಬಹುದು. ಆ ಹಿನ್ನೆಲೆಯಲ್ಲಿ ಇ-ಆಡಳಿತ ಇಲಾಖೆಯು “ಇ- ಕನ್ನಡ’ ಯೋಜನೆಯಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪದ ಕಣಜ ಹಾಗೂ ದೇಸೀ ಕರಣ ಯೋಜನೆಯನ್ನು ರೂಪಿಸಲಾಗಿದೆ.


 

 

ಯೋಜನೆ ಉದ್ದೇಶ

 


ಕನ್ನಡದ ಎಲ್ಲ ನಿಘಂಟು, ಪದಕೋಶ ಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. 200ಕ್ಕೂ ಹೆಚ್ಚು ಹಳೆಗನ್ನಡ, ಹೊಸಗನ್ನಡ ನಿಘಂಟುಗಳನ್ನು ಗುರುತಿಸಲಾಗಿದೆ. ಡಿಜಿಟಲ್‌ ಸ್ವರೂಪದಲ್ಲಿರುವ ಹಲವು ನಿಘಂಟುಗಳನ್ನು ಆದ್ಯತೆ ಮೇರೆಗೆ ಪಟ್ಟಿ ಮಾಡಿ ಆನ್‌ಲೈನ್‌ ವೇದಿಕೆಯಲ್ಲಿ ಸೇರಿಸುವ ಕಾರ್ಯ ನಡೆದಿದೆ.






ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಪತ್ರಿಕಾ ಅಕಾಡೆಮಿ, ನವ ಕರ್ನಾಟಕ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಕೇಂದ್ರ ಸರಕಾರದ ಭಾರತೀಯ ಭಾಷಾ ಸಂಸ್ಥಾನ, ಕೇಂದ್ರ ಸರಕಾರದ ಸಿಎಸ್‌ಟಿಟಿ ಸಂಸ್ಥೆ ಸಹಿತ 40ಕ್ಕೂ ಹೆಚ್ಚು ನಿಘಂಟು, ಪದಕೋಶಗಳ ಹಕ್ಕುಸ್ವಾಮ್ಯ ಇಲಾಖೆಗೆ ತಲುಪಿದೆ.




ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ

 

 ಇನ್ನೊಂದೆಡೆ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಮುಂದಾಗಿದೆ. ಸರಕಾರದ ಯಾವುದೇ ಇಲಾಖೆ ನಿರ್ದಿಷ್ಟ ಇಂಗ್ಲಿಷ್‌ ಪದಕ್ಕೆ ಕನ್ನಡ ಪದ ನೀಡುವಂತೆ ಸಮಿತಿಯನ್ನು ಕೋರಬಹುದು. ಆಗ ಸಮಿತಿಯು ಈಗಾಗಲೇ ಕನ್ನಡ ಬಳಕೆ ಪದವಿದ್ದರೆ ಆ ಬಗ್ಗೆ ಮಾಹಿತಿ ಒದಗಿಸಲಿದೆ. ಒಂದೊಮ್ಮೆ ಸೂಕ್ತ ಪದವಿಲ್ಲದಿದ್ದರೆ ಚರ್ಚಿಸಿ ಹೊಸ ಪದ ಆಯ್ಕೆ ಮಾಡಿ ನೀಡಲಿದೆ. ಆ ಮೂಲಕ ಪದಕೋಶವನ್ನೂ ವೃದ್ಧಿಸುವುದು ಯೋಜನೆಯ ಉದ್ದೇಶ.



Find Out More:

Related Articles: