ದೇಶದಲ್ಲಿ ಇನ್ನು ಮುಂದೆ ಒಂದೇ ಚುನಾವಣೆನಾ..?

Soma shekhar
ಒಂದು ಪ್ರಜಾ ಪ್ರಭುತ್ವ ದೇಶವೆಂದರೆ ಆ ದೇಶದಲ್ಲಿ ಹಲವಾರು ಚುನಾವಣೆಗಳು ನಡೆಯುತ್ತದೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಕೇಂದ್ರಕ್ಕೆ ಸಂಬಂಧಿಸಿದ ಚುನಾವಣೆಗಳು ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಚುನಾವಣೆಗಳು ಇದರ ಜೊತೆಗೆ ಸ್ಥಳೀಯ ಮಟ್ಟದಲ್ಲೂ ಕೂಡ ಅನೇಕ ಚುನಾವಣೆಗಳೂ ನಡೆಯುತ್ತದೆ  ಈ  ಎಲ್ಲಾ ಚುನಾವಣೆಗೂ ಒಂದೇ ಮತದಾರರ ಪಟ್ಟಿಯನ್ನು ಬಳಸುವಂತೆ ಕೇಂದ್ರ ಸರ್ಕಾರ ತೀರ್ಮಾನಿದೆ 


ಹೌದು ಬಿಜೆಪಿಯ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ “ಒಂದು ದೇಶ -ಒಂದು ಚುನಾವಣೆ’ಯ ದಿನಗಳು ಸನ್ನಿಹಿತವಾಗುತ್ತಿವೆಯೇ? ಇತ್ತೀಚಿನ ಬೆಳವಣಿಗೆಗಳು ಇದಕ್ಕೆ ಪೂರಕವಾಗಿವೆ. ಆ.13ರಂದು ಪ್ರಧಾನಿ ಕಾರ್ಯಾಲಯವು “ದೇಶಕ್ಕೊಂದೇ ಮತದಾರರ ಪಟ್ಟಿ’ ತಯಾರಿಸುವ ಸಲುವಾಗಿ ಅಧಿಕಾರಿಗಳ ಸಭೆ ನಡೆಸಿದೆ. ಸದ್ಯ ಕೇಂದ್ರ ಚುನಾವಣ ಆಯೋಗ ಮತ್ತು ರಾಜ್ಯ ಚುನಾವಣ ಆಯೋಗಗಳು ಪ್ರತ್ಯೇಕವಾಗಿ ಮತದಾರರ ಪಟ್ಟಿ ತಯಾರಿಸುತ್ತಿವೆ. ದೇಶಕ್ಕೊಂದೇ ಮತದಾರರ ಪಟ್ಟಿ ಸಿದ್ಧವಾದರೆ ಒಂದು ದೇಶ, ಒಂದು ಚುನಾವಣೆ ಸುಲಭ ಎಂಬ ಉದ್ದೇಶದಿಂದ ಸಭೆ ನಡೆಸಲಾಗಿದೆ.


ಪ್ರಧಾನಮಂತ್ರಿಗಳ ಪ್ರಿನ್ಸಿಪಲ್‌ ಸೆಕ್ರೆಟರಿ ಪಿ.ಕೆ.ಮಿಶ್ರಾ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಸಭೆಯಲ್ಲಿ ಸಂಪುಟ ಕಾರ್ಯದರ್ಶಿ ರಾಜೀವ್‌ ಚೌಬಾ, ಸಂಸದೀಯ ಕಾರ್ಯದರ್ಶಿ ಜಿ. ನಾರಾಯಣ ರಾಜು, ಪಂ.ರಾಜ್‌ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಮತ್ತು ಕೇಂದ್ರ ಚುನಾವಣ ಆಯೋಗದ ಮಹಾ ಕಾರ್ಯದರ್ಶಿ ಉಮೇಶ್‌ ಸಿನ್ಹಾ ಭಾಗಿಯಾಗಿದ್ದರು. ಒಂದು ವೇಳೆ ದೇಶಕ್ಕೊಂದೇ ಮತದಾರರ ಪಟ್ಟಿ ಸಿದ್ಧವಾದರೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶಕ್ಕೆ ಇನ್ನಷ್ಟು ಸನಿಹವಾದಂತಾಗುತ್ತದೆ ಎಂಬುದು ಕೇಂದ್ರ ಸರಕಾರದ ಚಿಂತನೆ.


ಎರಡು ಆಯ್ಕೆಗಳ ಬಗ್ಗೆ ಚರ್ಚೆ

ಈ ಸಭೆಯಲ್ಲಿ ಪ್ರಮುಖವಾಗಿ ಎರಡು ಆಯ್ಕೆಗಳ ಬಗ್ಗೆ ಚರ್ಚೆಯಾಗಿದೆ. ಒಂದು, ಆರ್ಟಿಕಲ್‌ 243 ಕೆ ಮತ್ತು 243 ಝಡ್ಎಗೆ ಸಾಂವಿಧಾನಿಕ ತಿದ್ದುಪಡಿ ತರುವುದು. ಈ ಮೂಲಕ ದೇಶದ ಎಲ್ಲ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನೇ ಬಳಕೆ ಮಾಡುವಂತೆ ಕಡ್ಡಾಯ ಮಾಡುವುದು. ಎರಡು, ರಾಜ್ಯ ಸರಕಾರಗಳ ಮನವೊಲಿಸಿ, ಕೇಂದ್ರ ಚುನಾವಣ ಆಯೋಗ ರೂಪಿಸುವ ಮತದಾರರ ಪಟ್ಟಿಯನ್ನೇ ಎಲ್ಲ ಚುನಾವಣೆಗಳಲ್ಲಿ ಬಳಸುವಂತೆ ಮಾಡುವುದು.



ಏನಿದು 243 ಕೆ ಮತ್ತು 243 ಝಡ್?

ಈ ಎರಡೂ ಪರಿಚ್ಛೇದಗಳು ರಾಜ್ಯ ಚುನಾವಣ ಆಯೋಗಗಳಿಗೆ ವಿಶೇಷ ಅಧಿಕಾರ ನೀಡಿವೆ. ರಾಜ್ಯ ಚುನಾವಣ ಆಯೋಗವು ಸ್ಥಳೀಯ ಸಂಸ್ಥೆಗಳಾದ ಪಾಲಿಕೆ ಮತ್ತು ಪಂಚಾಯತ್‌ಗಳಿಗೆ ಚುನಾವಣೆ ನಡೆಸುತ್ತದೆ. ಹೀಗಾಗಿ ರಾಜ್ಯ ಚು. ಆಯೋಗಗಳಿಗೆ ಮತದಾರರ ಪಟ್ಟಿ ರೂಪಿಸುವ ಸಲುವಾಗಿ ನಿರ್ದೇಶನ ನೀಡುವ, ನಿಯಂತ್ರಿಸುವ ಮತ್ತು ಚುನಾವಣೆ ನಡೆಸುವ ಅಧಿಕಾರ ನೀಡಲಾಗಿದೆ. ಹೀಗಾಗಿಯೇ ರಾಜ್ಯ ಆಯೋಗಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರತ್ಯೇಕ ಮತದಾರ ಪಟ್ಟಿ ರೂಪಿಸುತ್ತವೆ.


ಕೆಲವು ರಾಜ್ಯಗಳಲ್ಲಿ ಮಾತ್ರ
 ಕರ್ನಾಟಕ ಸಹಿತ ಕೆಲವು ರಾಜ್ಯಗಳು ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಕೇಂದ್ರ ಚುನಾವಣ ಆಯೋಗದ ಮತದಾರರ ಪಟ್ಟಿಯನ್ನೇ ಬಳಸಿಕೊಳ್ಳುತ್ತವೆ. ಆದರೆ ಉತ್ತರ ಪ್ರದೇಶ, ಉತ್ತರಾಖಂಡ, ಒಡಿಶಾ, ಅಸ್ಸಾಂ, ಮಧ್ಯಪ್ರದೇಶ, ಕೇರಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌ ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಮತದಾರರ ಪಟ್ಟಿ ಮಾಡಿಕೊಳ್ಳುತ್ತವೆ.



ರಾಜ್ಯಗಳ ಮನವೊಲಿಕೆ
 ಆ. 13ರಂದು ನಡೆದ ಸಭೆಯಲ್ಲಿ ಕೇಂದ್ರ ಚುನಾವಣ ಆಯೋಗ ಸಿದ್ಧಪಡಿಸುವ ಮತದಾರರ ಪಟ್ಟಿಯನ್ನೇ ಬಳಕೆ ಮಾಡುವಂತೆ ರಾಜ್ಯ ಚುನಾವಣ ಆಯೋಗಗಳ ಮನವೊಲಿಕೆ ಮಾಡುವ ನಿಲುವು ವ್ಯಕ್ತಪಡಿಸಲಾಗಿದೆ. ಪಿ.ಕೆ. ಮಿಶ್ರಾ ಅವರು ಕ್ಯಾಬಿನೆಟ್‌ ಕಾರ್ಯದರ್ಶಿ ರಾಜೀವ್‌ ಚೌಬಾ ಅವರಿಗೆ ರಾಜ್ಯ ಸರಕಾರಗಳನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Find Out More:

Related Articles: