ಕೊವಿಡ್-19ನ ವ್ಯಾಪಕ ಆಕ್ರಮಣದಲ್ಲೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತಕ್ಕೆ ಸಮಾಧಾನಕರ ಸುದ್ದಿ!!
ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಹರಡಿ ಹಲವು ಶ್ರೀಮಂತ ರಾಷ್ಟ್ರಗಳನ್ನು ಸಾವಿನ ಕೂಪದಲ್ಲಿ ಮುಳುಗಿಸಿ ಅಟ್ಟಹಾಸ ಮೆರೆಯುತ್ತಿದೆ. ಇದರಿಂದಾಗಿ ಹಲವು ರಾಷ್ಟಗಳು ಸಾಕಷ್ಟು ಭಯದಲ್ಲಿ ಬೆಂದು ಹೋಗುತ್ತಿದೆ. ಈಗಾಗಲೇ ಪ್ರಪಂಚಾದ್ಯಂತ ಲಕ್ಷಾಂತರ ಮಂದಿ ಕೊರೋನಾ ವೈರಸ್ ಇಂದಾಗಿ ಸಾವನ್ನಪ್ಪಿದ್ದಾರೆ, ಹಾಗೂ ಲಕ್ಷಾಂತರ ಮಂದಿ ಕೊರೋನಾ ಸೋಂಕಿನಲ್ಲಿ ಬಳಲುತ್ತಿದ್ದಾರೆ, ಅದೇ ರೀತಿ ಭಾರತದಲ್ಲೂ ಕೂಡ ಸೋಂಖಿತರ ಸಂಖ್ಯೆ ಲಕ್ಷವನ್ನು ದಾಟಿ ಶರ ವೇಗದಲ್ಲಿ ಮುಂದೋಗುತ್ತಿದೆ, ಅದರಂತೆಯೇ ಹಲವು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ ಈ ಬಗ್ಗೆ ವಿಶ್ವಾರೋಗ್ಯ ಸಂಸ್ಥೆ ಭಾರತಕ್ಕೆ ಸಮಾಧಾನಕರ ಸಂಗತಿಯೊಂದನ್ನು ತಿಳಿಸಿದೆ. ಅಷ್ಟಕ್ಕೂ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಸಂಗತಿ ಏನು ಗೊತ್ತಾ..?
ಭಾರತ ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಎರಡು ಲಕ್ಷ ದಾಟಿದೆ. ಹೀಗಿದ್ದರೂ ಕೂಡ ಭಾರತ ಭಯಪಡಬೇಕಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುತ್ತಿದ ಏಕೆಂದರೆ, ಭಾರತದಲ್ಲಿ ಪ್ರಸ್ತುತ ಕರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು ತೆಗೆದುಕೊಳ್ಳುತ್ತಿರುವ ಸಂಖ್ಯೆ ಮೂರು ವಾರಗಳಷ್ಟಿದೆ. ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ವೇಗ ಗಮನಿಸಿದರೆ, ಅಷ್ಟೊಂದು ತೀವ್ರವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ತುರ್ತು ಯೋಜನೆಗಳ ಕಾರ್ಯಕಾರಿ ನಿರ್ದೇಶಕ ಮೈಕಲ್ ರ್ಯಾನ್ ಹೇಳಿದ್ದಾರೆ.
ಜತೆಗೆ, ಭಾರತದ ವಿವಿಧೆಡೆಗಳಲ್ಲಿ ಈ ಸೋಂಕು ವ್ಯಾಪಿಸಿರುವ ಪ್ರಮಾಣದಲ್ಲಿ ವ್ಯತ್ಯಾಸವಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಒಂದೇ ತೆರನಾಗಿ ಹಬ್ಬಿಲ್ಲ ಎಂದು ರ್ಯಾನ್ ಹೇಳಿದ್ದಾರೆ.
ಭಾರತದಲ್ಲಿ ದೇಶವ್ಯಾಪಿ ವಿಧಿಸಲಾಗಿದ್ದ ಲಾಕ್ಡೌನ್ ಸೋಂಕು ವ್ಯಾಪಿಸುವುದನ್ನು ನಿಧಾನಗೊಳಿಸಿದೆ. ಆದರೆ, ಜನ ಹಾಗೂ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಿರುವುದರಿಂದ ಸೋಂಕು ವ್ಯಾಪಿಸುವ ಸಾಧ್ಯತೆಗಳು ಮೊದಲಿಗಿಂತಲೂ ಹೆಚ್ಚಾಗಿವೆ.
ಭಾರತದಲ್ಲಿನ್ನೂ 'ಕರೊನಾ ಸ್ಫೋಟ' ಸಂಭವಿಸದಿದ್ದರೂ ಲಾಕ್ಡೌನ್ ತೆರವು ಕಾರಣದಿಂದಾಗಿ ಅಂಥದ್ದೊಂದು ಸ್ಫೋಟ ಸಂಭವಿಸುವ ಸಾಧ್ಯತೆಗಳು ಇಲ್ಲದಿಲ್ಲ ಎಂದೂ ರ್ಯಾನ್ ಎಚ್ಚರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳುವ ಪ್ರಕಾರ, ಭಾರತದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದ್ದರೂ, 130 ಕೋಟಿ ಜನರಿರುವ, ವಿಶಾಲ ದೇಶದಲ್ಲಿ ಇದು ಅಂಥ ದೊಡ್ಡ ಸಂಖ್ಯೆಯೇನಲ್ಲ. ಆದರೂ, ಸಂಖ್ಯೆ ದುಪ್ಪಟ್ಟಾಗುವ ಅವಧಿ ಹೆಚ್ಚಾಗದಂತೆ ಹಾಗೂ ಪರಿಸ್ಥಿತಿ ಉಲ್ಬಣಿಸದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳುತ್ತಾರೆ.