ಮೋದಿ ವಿರುದ್ಧ ಘೋಷಣೆ ಕೂಗಿದರೆ ಸುಟ್ಟು ಭಸ್ಮ ಆಗ್ತೀರ

Soma shekhar
ಅಲಿಘಡ, ಉತ್ತರ ಪ್ರದೇಶ: ರಾಷ್ಟ್ರಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌.ಆರ್‌.ಸಿ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಘೋಷಣೆ ಕೂಗಿದರೆ ಸಜೀವ ದಹನ ಮಾಡಲಾಗುವುದು ಎಂದು ಬಿಜೆಪಿಯ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೌದು, ಶಾಕ್ ಆದರೂ ನಂಬಲೇಬೇಕಾದ ವಿಷಯವಿದು. 
 
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಘೋಷಣೆ ಕೂಗಿದರೆ ಅವರನ್ನು ಜೀವಂತ ಸುಡಲಾಗುವುದು ಎಂದು ಉತ್ತರ ಪ್ರದೇಶ ಬಿಜೆಪಿ ಸಚಿವ ರಘುರಾಜ್‌ ಸಿಂಗ್‌ ಬಹಿರಂಗ ಬೆದರಿಕೆ ಒಡ್ಡಿದ್ದಾರೆ. ಹೌದು, ಇದೀಗ ಈ ಹೇಳಿಕೆ ಭಾರೀ ವಿವಾದಾತ್ಮಕವಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆ ಪರ ಆಲಿಘಡದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಎಎ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
 
ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, ''ದೇಶದಲ್ಲಿ ಶೇ. 1ರಷ್ಟು ಜನರು ಮಾತ್ರ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುತ್ತಿದ್ದಾರೆ. ನಮ್ಮ ತೆರಿಗೆ ಹಣ ತಿಂದು, ನಮ್ಮ ನಾಯಕರ ವಿರುದ್ಧವೇ ಘೋಷಣೆಗಳನ್ನು ಕೂಗುತ್ತಾರೆ. ಈ ದೇಶ ಎಲ್ಲಾ ಜಾತಿ, ಧರ್ಮ, ನಂಬಿಕೆಯನ್ನು ಹೊಂದಿರುವ ಜನರಿಗೆ ಸೇರಿದ್ದು. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿದರೆ ಸಹಿಸುವುದಿಲ್ಲ,'' ಎಂದು ವಿವಾದಾತ್ಮಕವಾದ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಪ್ರತಿಪಕ್ಷಗಳೆಲ್ಲ ಕೆಂಡಾಮಂಡಲವಾಗಿವೆ. 
 
ಭಾರತದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ''ನೆಹರೂರವರ ಜಾತಿ ಯಾವುದು? ಅವರಿಗೆ ಯಾವುದೇ ಖಾನ್‌ ದಾನ್‌ ಇರಲಿಲ್ಲ,'' ಎಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌.ಆರ್‌.ಸಿ ವಿರೋಧಿಸಿ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು ಬಿಜೆಪಿಯ ವಿರುದ್ಧ ಪ್ರತಿಭಟನಾಕಾರರು ಘೋಷಣೆಯನ್ನು ಕೂಗುತ್ತಿದ್ದಾರೆ. ಇದೀಗ ರಾಷ್ಟ್ರಾದ್ಯಂತ ಪೌರತ್ವ ಕಿಚ್ಚು ಮತ್ತಷ್ಟು ಹೆಚ್ಚಾಗಲು ಈ ಹೇಳಿಕೆ ಪುಷ್ಠಿ ನೀಡಿದಂತಿದೆ.

Find Out More:

Related Articles: