ಸ್ಟಾರ್ ಕನ್ನಡಿಗ, ಅರೇ ಏನಪ್ಪಾ ಇದು. ಹೆಸರೇ ಒಂಥರಾ ವಿಚಿತ್ರವಾಗಿ ಇದೆಯಲ್ಲ. ಯಾವುದಾದರು ಬಿರುದು ಇರಬಹುದು ಎಂದುಕೊಂಡಿರುವ. ಆಗೆಂದು ಕೊಂಡಿದ್ದರೆ ಖಂಡಿತವಾಗಿಯೂ ನಿಮ್ಮ ಆಲೋಚನೆ ತಪ್ಪು. ಯಾಕೆಂದರೆ ಸ್ಟಾರ್ ಕನ್ನಡಿಗ ಎನ್ನುವುದು ಬಿರುದಲ್ಲ. ಅದು ಸ್ಯಾಂಡಲ್ ವುಡ್ ನ ಚಲನಚಿತ್ರವೊಂದರ ಹೆಸರು.
ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರೋ ಈ ಚಿತ್ರವನ್ನು ಸಿನಿಮಾ ಪ್ರೇಮ ಹೊಂದಿರುವ ಆಟೋ ಚಾಲಕರೇ ಸೇರಿಕೊಂಡು ನಿರ್ದೇಶನ ಮಾಡಿರೋದು ವಿಶೇಷ. ಸಿನಿಮಾವನ್ನೇ ಉಸಿರಾಗಿಸಿಕೊಂಡು ಈ ಹಾದಿಯ ತುಂಬಾ ಹತ್ತಾರು ಸವಾಲುಗಳನ್ನು ಎದುರಿಸುತ್ತಲೇ ಸಾಗಿ ಬಂದಿರುವವರು ಮಂಜುನಾಥ್. ಅದೆಂಥಾದ್ದೇ ಅಡೆತಡೆಗಳು ಬಂದರೂ ಆತ್ಮಸ್ಥೈರ್ಯ ಒಂದಿದ್ದರೆ ಗುರಿ ಸಾಧಿಸಬಹುದೆಂಬುದಕ್ಕೆ ಉದಾಹಣೆಯೆಂಬಂತೆ ಸ್ಟಾರ್ ಕನ್ನಡಿಗ ಚಿತ್ರ ಇದೇ ನವೆಂಬರ್ ಒಂದರಂದು ಬಿಡುಗಡೆಗೆ ತಯಾರಾಗಿದೆ.
ಬೆಂಗಳೂರಿನ ಜಯನಗರದ ಒಡಲಲ್ಲಿರುವ ಸ್ಲಂ ಒಂದರಲ್ಲಿ ಬೆಳೆದ ಮಂಜುನಾಥ್ ಎದೆಯಲ್ಲಿ ಸಿನಿಮಾ ಕನಸು ಮೊಳಕೆಯೊಡೆದದ್ದು ಮತ್ತು ಅವರದನ್ನು ಎಂಥಾ ಸಂಕಷ್ಟಗಳೆದುರಿಗೂ ಮಂಡಿಯೂರದಂತೆ ಸಾಗಿ ಬಂದದ್ದೊಂದು ಕಥೆಯಾದರೆ, ಗುರಿಯ ನೇರಕ್ಕೆ ನಿಂತು ಈ ಸಿನಿಮಾವನ್ನು ರೂಪಿಸಿದ್ದ ಮತ್ತೊಂದು ಸಾಹಸ. ಮಂಜುನಾಥ್‍ಗಿರೋ ಸಿನಿಮಾ ಕನಸು, ಶ್ರದ್ಧೆ ಮತ್ತು ಪ್ರತಿಭೆಗಳನ್ನು ಕಂಡಿದ್ದ ಗೆಳೆಯರೇ ಒಂದಷ್ಟು ಮಂದಿ ಕಾಸು ಹೊಂದಿಸಿ ಈ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿದೆ.
ಅಂಥಾ ಎಲ್ಲರೂ ಅಪ್ಪಟ ಸಿನಿಮಾ ಪ್ರೇಮದೊಂದಿಗೇ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು.
ಆದರೆ ಅವರು ಹೊಂದಿಸಿದ ಕಾಸು ಕಣ್ಣೆದುರೇ ಕರಗಿ ಹೋಗುತ್ತಿತ್ತು. ಕಡೆ ಕಡೆಗೆ ಈ ಸಿನಿಮಾ ಒಂದು ಸಲ ಹೇಗಾದರೂ ಪೂರ್ತಿಗೊಂಡರೆ ಸಾಕೆಂಬಂಥೆ ಹಪಾಹಪಿಸೋ ಪರಿಸ್ಥಿತಿಯೂ ಬಂದಿತ್ತು. ಕಾಸೆಲ್ಲ ಖಾಲಿಯಾದಾಗ ಚಿತ್ರೀಕರಣ ನಿಲ್ಲಿಸಿ, ನಂತರ ಹೇಗೋ ಹರಸಾಹಸ ಮಾಡಿ ಕಾಸು ಹೊಂದಿಸಿ ಚಿತ್ರೀಕರಣ ಆರಂಭಿಸಿ ಅಂತೂ ಈ ಸಿನಿಮಾ ಮುಗಿಸಿಕೊಂಡಿದ್ದೇ ದೊಡ್ಡ ಸಾಹಸ. ಇಲ್ಲಿ ವ್ಯಾವಹಾರಿಕತೆಗ ಗಂಧ ಗಾಳಿಯೂ ಇಲ್ಲದ ಕಲಾಪ್ರೇಮ ಮಾತ್ರವೇ ಇದ್ದುದರಿಂದಲೇ ಸ್ಟಾರ್ ಕನ್ನಡಿಗ ಭರವಸೆಯ ಚಿತ್ರವಾಗಿ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ ಎಂದು ತಿಳಿದುಬಂದಿದೆ.