ವರ್ಷಾರಂಭಕ್ಕೆ ಕೆಪಿಸಿಸಿ ಡಿಕೆಶಿ ಕೈಯಲ್ಲಿ

Soma shekhar
ಬೆಂಗಳೂರು: ಪ್ರಸ್ತುತ ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾವಣೆಯ ಪರ್ವ ಶುರುವಾಗಿದ್ದು, ಕೆಪಿಸಿಸಿ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ನೀಡಿದ್ದ ರಾಜೀನಾಮೆಗೆ ಇದೀಗ ಕೈ ಹೈಕಮಾಂಡ್ ಬಹುತೇಕ ಡಿಕೆಶಿ ಹೆಸರನ್ನು ಖಚಿತಗೊಳಿಸಿದೆ. ಇನ್ನೊಂದು ವಾರದಲ್ಲೇ ಅಂದರೆ ಜನವರಿಯ ಮೊದಲ ವಾರದಲ್ಲಿ ಪಟ್ಟಾಭಿಷೇಕಕ್ಕೆ ಸಿದ್ದವಾಗಿದೆ. 
 
ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೊರತಾಗಿ ಕೆಪಿಸಿಸಿಯಲ್ಲಿ ಸದ್ಯ ಯಾವುದೇ ಪದಾಧಿಕಾರಿ ಇಲ್ಲ. ಖಂಡ್ರೆ ಅವರ ಸ್ಥಾನ ಅಭಾದಿತವಾಗಿದ್ದು, ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಎಐಸಿಸಿ ವರಿಷ್ಠರ ತೀರ್ಮಾನ ಯಾವುದೇ ಕ್ಷಣದಲ್ಲಿ ಹೊರಬೀಳಲಿದೆ. ಹೊಸ ಸಾರಥಿ ಅಧಿಕಾರ ವಹಿಸಿಕೊಂಡಬಳಿಕ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಚಾಲನೆ ಪಡೆಯಲಿದೆ ಎಂದು ತಿಳಿದು ಬಂದಿದೆ. ಕೆಪಿಸಿಸಿಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎಂಬಿ ಪಾಟೀಲ್‌, ಡಿಕೆ ಶಿವಕುಮಾರ್‌ ಹಾಗೂ ಕೆಎಚ್‌ ಮುನಿಯಪ್ಪ 3ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ರಾಜ್ಯ ನಾಯಕರ ಅಭಿಪ್ರಾಯ ಆಧರಿಸಿದ ವೀಕ್ಷಕರ ವರದಿಯಂತೆ ಮುಂದಿನ ಮೂರು ವರ್ಷಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಸಮರ್ಥವಾಗಿ ಕಟ್ಟುವ ಉದ್ದೇಶದಿಂದ ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷರ ಪಟ್ಟ ಪಕ್ಕಾ ಆಗಿದೆ. 
 
ಒಂದೆರಡು ದಿನಗಳಲ್ಲೇ ನೂತನ ಅಧ್ಯಕ್ಷರ ಘೋಷಣೆಯಾಗಲಿದೆ. ತಪ್ಪಿದರೆ, ಮುಂದಿನ ವಾರ ಹೊಸ ವರ್ಷದ ಆರಂಭದಲ್ಲೇ ಹೈಕಮಾಂಡ್‌ ತೀರ್ಮಾನ ಹೊರಬೀಳಲಿದೆ. ಜನವರಿ 3ನೇ ವಾರದಲ್ಲಿ ಕಾರ್ಯಕಾರಿ ಸಮಿತಿ ಪುನಾರಚನೆ ವೇಳೆ ರಾಜ್ಯ ಕಾಂಗ್ರೆಸ್‌ನ ಉಳಿದ ಹಿರಿಯ ನಾಯಕರ ಹುದ್ದೆ ಮತ್ತು ಜವಾಬ್ದಾರಿಗಳು ನಿರ್ಧಾರವಾಗಲಿವೆ. ಹೈಕಮಾಂಡ್‌ ಸೂಚನೆಯಂತೆ ಹಲವು ರಾಜ್ಯ ನಾಯಕರು 2020ಜನವರಿಯ ಮೊದಲ ವಾರವೇ ದೆಹಲಿಗೆ ತೆರಳಿದ್ದಾರೆ. 
 
"ಕಾಂಗ್ರೆಸ್‌ನಲ್ಲಿ ಬ್ಲಾಕ್‌ಮೇಲ್‌, ಷರತ್ತು ಹಾಕುವುದು ಯಾವುದೂ ನಡೆಯಲ್ಲ. ಶಿಸ್ತಿನ ಸಿಪಾಯಿ ಆಗಿದ್ದರೆ ಮಾತ್ರ ಗೌರವ ಸಿಗುತ್ತದೆ. ಕಂಡೀಷನ್‌ ಹಾಕಿ ವರಿಷ್ಠರನ್ನು ಮಣಿಸುತ್ತೇನೆ ಎಂದುಕೊಂಡಿದ್ದರೆ ಅವರು ಮೂರ್ಖರಾಗುತ್ತಾರೆ," ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, "ಈ ಬಗ್ಗೆ ನನಗೇನೂ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಟೋಪಿ ಐದೇ ನಿಮಿಷಕ್ಕೆ ಬದಲಾಗುತ್ತೆ. ಆದರೆ, ಪಕ್ಷದ ಶಿಸ್ತಿನ ಸಿಪಾಯಿಗಳಿಗೆ ಗೌರವ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು. ಡಿಕೆಶಿ ಪಟ್ಟ ಒಲಿದಿದ್ದು ಪಕ್ಷ ಸಂಘಟನೆಯ ಕಾರ್ಯದಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

Find Out More:

Related Articles: