ಮುಂಬೈ: ಫಲಿತಾಂಶ ಬಂದು ಹತ್ತು ದಿನ ಕಳೆದರೂ ಸಹ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ಶಿವಸೇನೆ ಮಧ್ಯೆ ಭಾರೀ ಪೈಪೋಟಿ ಹೆಚ್ಚಾಗುತ್ತದೆ. ಸಿಎಂ ಪಟ್ಟಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ. ಆದ್ದರಿಂದ ಎರಡೂ ಪಕ್ಷಗಳಿಂದಲೂ ವಿಭಿನ್ನ ಮಾರ್ಗದಲ್ಲಿ ಸರ್ಕಾರ ರಚಿಸಲು ಮುಂದಾಗುತ್ತಿವೆ. ಸರ್ಕಾರ ರಚನೆಯ ಕಸರತ್ತುಗಳು ನಡೆಯುತ್ತಿದ್ದು, ಶಿವಸೇನೆ ಪವಾರ್ ಅವರಿಗೆ ಕರೆ ನೀಡಿದೆ.
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಎನ್ ಸಿ ಪಿ ನಾಯಕ ಶರದ್ ಪವಾರ್ ಅವರಿಗೆ ಕರೆ ಮಾಡಿದ್ದು, ಶರದ್ ಪವಾರ್ ಅವರು ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ತಲಾ 2.5 ವರ್ಷ ಕ್ರಮವಾಗಿ ಶಿವಸೇನೆ ಮತ್ತು ಬಿಜೆಪಿ ಅಭ್ಯರ್ಥಿಗಳು ಮುಖ್ಯಮಂತ್ರಿಯಾಗುವ 50:50 ಯ ಶಿವಸೇನೆ ಬೇಡಿಕೆಗೆ ಬಿಜೆಪಿ ಸೊಪ್ಪುಹಾಕದ ಪರಿಣಾಮ ಈ ಬೆಳವಣಿಗೆ ಸಂಭವಿಸಿದೆ ಎನ್ನಲಾಗಿದ್ದು, ಮಹಾರಾಷ್ಟ್ರದಲ್ಲಿ ಬಜೆಪಿ ಅಧಿಕಾರ ಕಳೆದುಕೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಪಟ್ಟು ಬಿಡದ ಶಿವಸೇನೆ 50:50 ಅಂತಿಮ ಎನ್ನುತ್ತಿದೆ. "ಅಕಸ್ಮಾತ್ ಶಿವಸೇನೆ ಮನಸ್ಸು ಮಾಡಿದರೆ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸುವುದು ಕಷ್ಟವಿಲ್ಲ. ಆದರೆ ಜನರು ಕೊಟ್ಟಿರುವ ಜನಾದೇಶಕ್ಕೆ ವಿರುದ್ಧವಾಗಿ ಹೋಗಲು ನಾಯು ಇಷ್ಟಪಡುವುಸಿಲ್ಲ. ಬಿಜೆಪಿಗೆ ನಾವೇನು ಗಡುವು ನೀಡಿಲ್ಲ. 50:50 ಸೂತ್ರಕ್ಕೆ ಅವರು ಸಿದ್ಧವಿದ್ದರೆ ಈಗಲೇ ಸರ್ಕಾರ ರಚನೆಗೆ ನಮ್ಮ ಅಭ್ಯಂತರವಿಲ್ಲ" ಎಂದು ಸಂಜಯ್ ರಾವತ್ ಹೇಳಿದ್ದರು.
ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ. ಮುಂದೇನಾಗುತ್ತದೆ ಎಂಬುದು ಕಾದುನೋಡಬೇಕಾಗಿದೆ.