ಸಂತ್ರಸ್ತೆಯ ಸಂಬಂಧಿಕರಿಗೆ Yಹಂತದ ಭದ್ರತೆ ನೀಡಬೇಕು ಎಂದು ಕೇಳಲು ಕಾರಣವೇನು..?

Soma shekhar

ಉತ್ತರ ಪ್ರದೇಶದ ಹತ್ರಾಸ್ ಸಂತ್ರಸ್ತೆ ಕುಟುಂಬ ಸದಸ್ಯರನ್ನು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭೇಟಿ ಮಾಡಿದರು. ಈ ಮೊದಲು ಕುಟುಂಬಸ್ಥರ ಭೇಟಿಗೆ ತೆರಳುತ್ತಿದ್ದ ವೇಳೆ ಪೊಲೀಸರು ಇವರನ್ನೇ ಹತ್ರಾಸ್ ಗಡಿಯಲ್ಲಿರುವ ಬುಲ್ಗಡಿ ಗ್ರಾಮದ ಬಳಿ ತಡೆದಿದ್ದರು.




ಭಾನುವಾರದ ಹತ್ರಾಸ್ ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆ ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿ ಮಾಡಲು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಜೊತೆಗೆ ಐವರಿಗೆ ಪೊಲೀಸರು ಅನುಮತಿ ನೀಡಿದ್ದರು. ಸಂತ್ರಸ್ತೆ ಕುಟುಂಬ ಸದಸ್ಯರ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಚಂದ್ರಶೇಖರ್ ಆಜಾದ್ ಮಾತನಾಡಿದರು.




ಸಂತ್ರಸ್ತೆಯ ಸಂಬಂಧಿಕರ ಜೊತೆಗೆ ಹೆಚ್ಚು ಹೊತ್ತು ಚರ್ಚಿಸುವುದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಕುಟುಂಬ ಸದಸ್ಯರ ಸ್ಥಿತಿ ಅಷ್ಟೊಂದು ಸುರಕ್ಷಿತವಾಗಿದೆ ಎಂದು ಎನ್ನಿಸುವುದಿಲ್ಲ. ಪೊಲೀಸರು, ಎಸ್‌ಐಟಿ ಮತ್ತು ಸಿಬಿಐ ತನಿಖೆಯಿಂದ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿಲ್ಲ ಎಂದು ಅವರು ತಿಳಿಸಿದರು.





ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಂಬಂಧಿಕರಿಗೆ ಭದ್ರತೆಯ ಅವಶ್ಯಕತೆಯಿದೆ. ಜಿಲ್ಲಾಡಳಿತವೇ ಅವರಿಗೆ ಬೆದರಿಕೆ ಹಾಕಿರುವ ಆರೋಪವೂ ಇದೆ. ಈ ಹಿನ್ನೆಲೆ ಕುಟುಂಬಕ್ಕೆ Y- ಹಂತದ ಭದ್ರತೆ ನೀಡಬೇಕು. ನೀವು ಅವರಿಗೆ 'Y' ಹಂತದ ಭದ್ರತೆ ನೀಡುತ್ತಿರೋ ಅಥವಾ ಅವರನ್ನೆಲ್ಲ ನಾನು ನಮ್ಮ ಮನೆಗೆ ಕರೆದುಕೊಂಡು ಹೋಗಲೋ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಪ್ರಶ್ನೆ ಮಾಡಿದ್ದಾರೆ.






ಕಳೆದ ಸಪ್ಟೆಂಬರ್.14ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು. ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದಲಿತ ಯುವತಿ ಸಪ್ಟೆಂಬರ್.29ರಂದು ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆದಲ್ಲಿ ಕೊನೆಯುಸಿರೆಳೆದಿದ್ದಳು.





ಸಪ್ಟೆಂಬರ್.30ರ ಮಧ್ಯರಾತ್ರಿ 2.30ರ ಸಂದರ್ಭದಲ್ಲಿ ಪೊಲೀಸರೇ ಯುವತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು. ಇದರ ಬೆನ್ನಲ್ಲೇ ಸಂತ್ರಸ್ತೆ ಕುಟುಂಬಸ್ಥರ ಭೇಟಿಗೆ ತೆರಳುತ್ತಿದ್ದ ನಾಯಕರನ್ನು ಉತ್ತರ ಪ್ರದೇಶ ಪೊಲೀಸರು ತಡೆ ಹಿಡಿದಿದ್ದರು. ಇದಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು.

Find Out More:

Related Articles: