ಕೊರೋನಾ ತಡೆಗೆ ಸಚಿವ ಸಂಪುಟ ಸಭೆಯಲ್ಲಿ ಮಾಡಲಾದ ನಿರ್ಣಯಗಳೇನು..? ಇಲ್ಲಿದೆ ಉತ್ತರ

Soma shekhar

ಕೊರೋನಾ ವೈರಸ್ ರಾಜ್ಯದಲ್ಲಿ ಪ್ರತಿನಿತ್ಯ ಹೆಚ್ಚಾಗುತ್ತಲೇ ಇದ್ದು, ಪ್ರತಿನಿತ್ಯ ಸಾವಿರದ ಗಡಿಯನ್ನು ದಾಟಿ ಮುಂದೆ ಹೋಗುತ್ತಿದೆ ಇದರಿಂದಾಗಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆಯನ್ನು ಕೊಡಿಸಲು ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಉಂಟಾಗಿರುವುದರಿಂದ ಖಾಸಗೀ ಆಸ್ಪತ್ರೆಗಳ ನೆರವನ್ನೂ ಕೂಡ ಪಡೆಯಲಾಗಿದೆ. ಇದರ ಜೊತೆಗೆ ಹಲವು ಕೇರ್ ಸೆಂಟರ್ ಗಳನ್ನು ನಿರ್ಮಿಸಲಾಗಿದೆ. ಇಷ್ಟಾದರೂ ಕೂಡ ಕೊರೋನಾ ಮಾತ್ರ ಪ್ರತಿನಿತ್ಯ ಹರಡುತ್ತಲೇ ಇದೆ. ಈ ಕುರಿತಾಗಿ ಸಚಿವ ಸಂಪುಟ ಸಭೆಯನ್ನು ಮಾಡಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಅಷ್ಟಕ್ಕೂ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನಗಳು ಏನು ಗೊತ್ತಾ..?

 

ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬೆಂಗಳೂರನ್ನು ವಲಯಗಳಾಗಿ ವಿಂಗಡಿಸಿ ಸಚಿವರುಗಳಿಗೆ ಜವಾಬ್ದಾರಿ ಹಂಚುವುದು, ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ 507 ವೈದ್ಯರನ್ನು ಷರತ್ತು ಬದ್ದಿನೊಂದಿಗೆ ಖಾಯಂ ಮಾಡುವುದು ಸೇರಿದಂತೆ ಹಲವು ಆಡಳಿತಾತ್ಮಕ ನಿರ್ಣಯಗಳನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತಕ್ಷಣ ಆಯಂಬುಲೆನ್ಸ್‌ಗಳನ್ನು ಖರೀದಿ ಮಾಡಲು ತೀರ್ಮಾನ ಮಾಡಲಾಗಿದೆ. ಸಂಪುಟದಲ್ಲಿ ಕೈಗೊಳ್ಳಲಾದ ಇತರ ನಿರ್ಣಯಗಳು ಹೀಗಿವೆ.

 

* ರಾಜ್ಯ ಸರ್ಕಾರ ಆಪತ್ಕಾಲೀನ ನಿಧಿಯನ್ನು 50 ಕೋಟಿ ರೂ ಗಳಿಂದ 500 ಕೋಟಿ ರೂ. ಗಳಿಗೆ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ. ತಕ್ಷಣಕ್ಕೆ 80 ಕೋಟಿ ರೂ. ಬಳಸಿಕೊಳ್ಳಬಹುದಾಗಿತ್ತು. ಕೋವಿಡ್-19 ಸಂಕಷ್ಟ ಎದುರಿಸಲು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ.

 

* ಷರತ್ತಿಗೆ ಒಳಪಟ್ಟು ಗುತ್ತಿಗೆ ವೈದ್ಯರ ಖಾಯಂ ಮಾಡಲು ತೀರ್ಮಾನ. ವೈದ್ಯರು ಸಲ್ಲಿಸಿರುವ ಸೇವಾ ಅವಧಿಯನ್ನು ಖಾಯಂಗೊಳಿಸುವ ವೇಳೆ ಪರಿಗಣನೆ ಮಾಡಲಾಗುವುದು. ಪ್ರತಿ ಆರು ತಿಂಗಳು ಸೇವಾ ಅವಧಿಗೆ 2.5 ಗ್ರೇಸ್ ಮಾರ್ಕ್ ನೀಡಲು ತಿರ್ಮಾನ. ಗರಿಷ್ಠ 30 ರಷ್ಟು ಗ್ರೇಸ್ ಮಾರ್ಕ್ಸ ನೀಡಲು ಸಂಪುಟ ಸಭೆ ಒಪ್ಪಿಗೆ.

* ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ. ನಾಲ್ಕು ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳಿಗಾಗಿ 44 ಕೋಟಿ ರೂ. ಒದಗಿಸಲು ಒಪ್ಪಿಗೆ.

* ಕೋವಿಡ್‌ ನಿಯಂತ್ರಿಸಲು ಬೆಂಗಳೂರನ್ನು ವಲಯವಾರು ವಿಂಗಡಿಸಿ ಸಚಿವರಿಗೆ ಜವಾಬ್ದಾರಿ, ಒಂದೊಂದು ವಲಯಕ್ಕೆ ಒಬ್ಬೊಬ್ಬ ಸಚಿವರಿಗೆ ಜವಾಬ್ದಾರಿ ಹಂಚಿಕೆ.

* ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಬೋಸ್ಟನ್ ಕಂಪನಿಗೆ ಗುತ್ತಿಗೆ. ಮುಂದಿನ 12 ತಿಂಗಳಿಗೆ 12ಕೋಟಿ ರೂ. ವೇತನ ರೂಪದಲ್ಲಿ ಹಣ ನೀಡಲು ತೀರ್ಮಾನ.

* ಖಾಲಿಯಾದ ಕೆಪಿಎಸ್‌ಸಿ ಸದಸ್ಯರ ಹುದ್ದೆ ತುಂಬಲು ಸಿಎಂ ಯಡಿಯೂರಪ್ಪ ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟ ಸಂಪುಟ. ಕೆಪಿಎಸ್‌ಸಿ ಸದಸ್ಯ ಲಕ್ಷ್ಮೀ ನರಸಯ್ಯ ಎಂಬುವರು ನಿವೃತ್ತಿಯಾಗಲಿದ್ದಾರೆ.

* ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ, ಪ್ರಾಥಮಿಕ ವಿಚಾರಣೆಯನ್ನು 90 ದಿನಗಳಲ್ಲಿ ಮುಗಿಸಬೇಕು. 6 ತಿಂಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಸಬೇಕು. ಎರಡನ್ನು ಕಡ್ಡಾಯಗೊಳಿಸಿ ಕಾಯ್ದೆಗೆ ತಿದ್ದುಪಡಿ.

* ಹೆಸ್ಕಾಂ, ಜೆಸ್ಕಾಂ, ಬೆಸ್ಕಾಂ ಸೇರಿದಂತೆ ಎಲ್ಲ ವಿದ್ಯುತ್ ಕಂಪನಿಗಳಿಗೆ ಬಡ್ಡಿ ರಹಿತ 2500 ಕೋಟಿ ರೂ. ಸಾಲ ಮಂಜೂರು.

* ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಸೇಸ್ ನ್ನು ಶೇಕಡಾ 1.5 ಯಿಂದ ಶೇಕಡಾ 1ಕ್ಕೆ ಇಳಿಸಲು ತೀರ್ಮಾನ.

* ವಿಜಯಪುರದಲ್ಲಿ ಏರ್ ಪೋರ್ಟ್ ಸ್ಥಾಪನೆಗೆ 200 ಕೋಟಿ ರೂ. ನೀಡಲು ಆಡಳಿತಾತ್ಮಕ ಅನುಮೋದನೆ.

* ಜಿಲ್ಲಾ ಆಸ್ಪತ್ರೆಗಳಿಗೆ 207 ಕೋಟಿ ರೂ. ಹಣ ಮಂಜೂರು. ಹೈ ಫ್ಲೋ ಆಕ್ಸಿಜನ್ ಸಿಸ್ಟಮ್, ಬೆಡ್ ವ್ಯವಸ್ಥೆಗೆ ಹಣ ಮಂಜೂರು.

 

Find Out More:

Related Articles: