ಬೆಂಗಳೂರಿನಲ್ಲಿ ಖಾಸಗೀ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಎಷ್ಟು ಬೆಡ್ ಗಳನ್ನು ಮೀಸಲಿಡಲಿವೆ..?
ರಾಜ್ಯ ರಾಜಧಾನಿಯಲ್ಲಿ ಕೊರೋನಾ ವಯರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೋವಿಡ್ ಗೆ ಎಂದು ಮೀಸಲಿರಿಸಲಾಗಿದ್ದ ಆಸ್ಪತ್ರೆಗಳೆಲ್ಲವೂ ಕೂಡ ಭರ್ತಿಯಾಗಿ ಹೊಸದಾಗಿ ದಾಖಲಾಗುವ ಕೊರೋನಾ ರೋಗಿಗಳಿಗೆ ಬೆಡ್ ಗಳ ಕೊರತೆ ಉಂಟಾಗಲಿದೆ.ಈ ಕೊರತೆಯನ್ನು ನಿವಾರಣೆಯನ್ನು ಮಾಡುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸ್ಟೇಡಿಯಂಗಳನ್ನು ಕೇರ್ ಸೆಂಟರ್ ಗಳನ್ನಾಗಿ ಪರಿವರ್ತಿಸಲಾಗಿದೆ. ಇದರ ಜೊತೆಗೆ ಖಾಸಗೀ ಆಸ್ಪತ್ರೆಗಳಲ್ಲು ಕೂಡ ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ.
ಹೌದು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆ ಫಲಪ್ರದವಾಗಿದ್ದು ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಹಾಸಿಗೆಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿವೆ, ಇದಕ್ಕೆ 6,000 ದಿಂದ 7,000 ಹಾಸಿಗೆಗಳನ್ನು ತಮ್ಮದೇ ಆದ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆಗಳಲ್ಲಿ ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಪ್ರತಿಯೊಂದು ಖಾಸಗಿ ಆಸ್ಪತ್ರೆಗಳು ನರ್ಸಿಂಗ್ ಹೋಂಗಳಲ್ಲಿ ಲಭ್ಯವಿರುವ ಜನರಲ್ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್ ಸೌಲಭ್ಯ ಕುರಿತಾದ ಕ್ಷಣಕ್ಷಣದ ಮಾಹಿತಿ ಪಡೆಯುವುದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ರಿಯಲ್ ಟೈಂ ಡಾಟಾ ಆಧಾರದ ಮೇಲೆ ಹಾಸಿಗೆಗಳನ್ನು ಹಂಚಿಕೆ ಮಾಡಲಾಗುವುದು. ಇದರಿಂದ ರೋಗಿಗಳು ಒಂದು ಅಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯುವುದು ತಪ್ಪುತ್ತದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಈ ಮೊದಲು 400 ಆಂಬುಲೆನ್ಸ್ ನಿಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಮಾನ್ಯ ಮುಖ್ಯಮಂತ್ರಿಯವರು ಇದರ ಅವಶ್ಯಕತೆಯನ್ನು ಪರಿಗಣಿಸಿ 500 ಅಂಬುಲೆನ್ಸ್ ಬಳಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ 24 ಗಂಟೆಗಳಲ್ಲಿ ಎಲ್ಲಾ ಅಂಬುಲೆನ್ಸ್ ಗಳು ಸೇವೆಗೆ ಲಭ್ಯವಾಗಲಿವೆ. ಆಂಬುಲೆನ್ಸ್ ಅವಶ್ಯಕತೆ ಕೇವಲ ತೀವ್ರತರವಾದ ಲಕ್ಷಣ ಇರುವವರಿಗೆ ಮಾತ್ರ ಇದ್ದು ಲಕ್ಷಣರಹಿತರು ಟೆಂಪೋ ಟ್ರಾವೆಲರ್ ಗಳನ್ನು ಬಳಸಬಹುದಾಗಿದೆ ಎಂದು ಹೇಳಿದರು.
ಆಂಬುಲೆನ್ಸ್ ನಿರ್ವಹಣೆಗೂ ಕೇಂದ್ರೀಕೃತ ವ್ಯವಸ್ಥೆ ಬರಲಿದ್ದು ಡ್ಯಾಶ್ ಬೋರ್ಡ್ ಮೂಲಕ ಯಾವ ಸೋಂಕಿತರನ್ನು ಎಲ್ಲಿಗೆ ಸಾಗಿಸಬೇಕು ಎನ್ನುವುದನ್ನು ರಿಯಲ್ ಟೈಂ ಡಾಟಾ ಆಧಾರದ ಮೇಲೆ ನಿರ್ಧರಿಸಲಾಗುವುದು.. ವಾರಾಂತ್ಯದೊಳಗೆ ರಾಜ್ಯದಲ್ಲಿ ಆಂಟಿಜೆನ್ ಟೆಸ್ಟ್ ಕಿಟ್‌ಗಳು ಸಂಖ್ಯೆಯಲ್ಲಿ ಲಭ್ಯವಿರಲಿದ್ದು, 1 ಲಕ್ಷ ಆಂಟಿಜೆನ್ ಟೆಸ್ಟ್ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎಸ್.ಮಂಜುನಾಥ್ ಅವರು ಉಪಸ್ಥಿತರಿದ್ದರು.