ಸಿನಿಮಾ ಕಾರ್ಮಿಕರಿಗೆ ನೆರವಾಗುತ್ತಿರುವ ಆ ಉದ್ಯಮಿ ಪುತ್ರ ಯಾರು ಗೊತ್ತಾ..?
ಕೊರೊನಾ ವೈರಸ್ ಇಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿರುವಾಗ ಎಲ್ಲಾ ಉದ್ಯಮಗಳು ಸ್ಥಗಿತಕೊಂಡು ಕಾರ್ಮಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಹೊರತಾಗಿ ಸಿನಿಮಾ ಕಾರ್ಮಿಕರ ಪರಿಸ್ಥಿತಿ ಇಲ್ಲ. ಇಂತಹ ಅದೆಷ್ಟೋ ಸಿನಿಮಾ ಕಾರ್ಮಿಕರನ್ನು ಕೆಲಸವನ್ನು ಕಳೆದು ಕೊಂಡು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಕಾರ್ಮಿಕರಿಗೆ ನೆರವನ್ನು ನೀಡಲು ಉದ್ಯಮಿಗಳ ಪುತ್ರ ಮುಂದೆ ಬಂದಿದ್ದಾರೆ ಅಷ್ಟಕ್ಕೂ ಆ ಉದ್ಯಮಿ ಪುತ್ರ ಯಾರು ಗೊತ್ತಾ..?
ಹಾಲಿವುಡ್, ಬಾಲಿವುಡ್ ಸೇರಿದಂತೆ ಸೌತ್ನ ಬಹುತೇಕ ಎಲ್ಲಾ ಭಾಷೆಗಳಲ್ಲಿ ಸಿನಿಮಾಗಳನ್ನ ನಿರ್ಮಿಸಿದ ಕೀರ್ತಿ ರಿಲಯನ್ಸ್ ಎಂಟರ್ಟೈನ್ಮೆಂಟ್ಗೆ ಸಲ್ಲಲಿದೆ. ನಮ್ಮ ಕನ್ನಡದಲ್ಲೂ ಅನಿರುದ್ಧ್ರ ಇಜ್ಜೋಡು ಹಾಗೂ ಪುನೀತ್ ರಾಜ್ಕುಮಾರ್ರ ರಣವಿಕ್ರಮ ಸಿನಿಮಾಗಳನ್ನ ನಿರ್ಮಿಸಿ ಸ್ಯಾಂಡಲ್ವುಡ್ಗೂ ಕಾಲಿಟ್ಟಿತ್ತು ರಿಲಯನ್ಸ್. ಇದೀಗ ಅಂತಹ ನೂರಾರು ಸಿನಿಮಾಗಳನ್ನ ಸಿನಿಪ್ರಿಯರಿಗೆ ಉಣಬಡಿಸೋಕೆ ಕಾರಣೀಭೂತರಾದಂತಹ ಸಿನಿಕಾರ್ಮಿಕರ ನೆರವಿಗೆ ನಿಲ್ತಿದೆ ರಿಲಯನ್ಸ್ ಕಂಪೆನಿ.
ಸಿನಿ ಕಾರ್ಮಿಕರಿಗೆ ಬರೋಬ್ಬರಿ ಎರಡು ಕೋಟಿ ಸಹಾಯ ಮಾಡೋಕೆ ಮುಂದಾಗಿದ್ದಾರೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ. ಕೊರೊನಾ ಬೇಗೆಯಲ್ಲಿ ಜೀವನ ನಿರ್ವಹಣೆಗೂ ಕಷ್ಟವಾಗಿರೋ ಸಿನಿಕಾರ್ಮಿಕರ ಕೈಹಿಡಿಯಲು ಮುಂದಾಗಿರೋದು ಶ್ಲಾಘನೀಯ. ನಮ್ಮ ಕನ್ನಡದ ಸಿನಿ ಕಾರ್ಮಿಕರ ನೆರವಿಗೆ ಅಂತಲೇ ಅನಂತ್ ಅಂಬಾನಿ ಎರಡು ಕೋಟಿ ಫಂಡ್ ನೀಡಿರೋದು ಮೆಚ್ಚಬೇಕಾದ ವಿಷ್ಯ.
ಅಂದಹಾಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ರಾಕ್ಲೈನ್ ವೆಂಕಟೇಶ್, ತಾರಾ ಸೇರಿದಂತೆ ವಿಶೇಷ ಕಮಿಟಿಯೊಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಆಧರಿಸಿ ಸುಮಾರು ಆರು ಸಾವಿರ ಸಿನಿ ಕಾರ್ಮಿಕರಿಗೆ ಆರ್ಥಿಕ ನೆರವು ಸಿಗಲಿದೆ. 26 ವಲಯಗಳಿಂದ ಹೆಚ್ಚೂ ಕಡಿಮೆ 12 ಸಾವಿರ ಮಂದಿ ಕಾರ್ಮಿಕರು ಸಿನಿಮಾರಂಗದಲ್ಲಿ ಕಾರ್ಯ ನಿರ್ವಹಿಸ್ತಿದ್ದಾರೆ. ಅದ್ರಲ್ಲಿ ಮೊದಲ ಹಂತದಲ್ಲಿ ಆರು ಸಾವಿರ ಮಂದಿಗೆ ತಲಾ ೩ರಿಂದ 5 ಸಾವಿರ ರೂಗಳನ್ನು ನೀಡಲು ಯೋಜನೆ ರೂಪುಗೊಳ್ಳುತ್ತಿದೆ ಎನ್ನಲಾಗಿದೆ.
ಅಂದ್ಹಾಗೆ ಹಣ ನಗದು ರೂಪದಲ್ಲಿ ಸಿನಿಕಾರ್ಮಿಕರಿಗೆ ನೀಡಲಾಗುತ್ತಿಲ್ಲ. ವೋಚರ್ ರೂಪದಲ್ಲಿ ೩ರಿಂದ ೫ ಸಾವಿರ ರೂಗಳ ವೋಚರ್ಗಳನ್ನು ಸಿನಿಕಾರ್ಮಿಕರಿಗೆ ವಿತರಿಸಲಾಗುತ್ತಂತೆ. ನಂತ್ರ ಆ ವೋಚರ್ಗಳಿಂದ ರಿಲಯನ್ಸ್ ಸಮೂಹ ಸಂಸ್ಥೆಯ ಔಟ್ಲೆಟ್ಗಳಲ್ಲಿ ದಿನಸಿ, ದವಸ, ಧಾನ್ಯಗಳು ಹಾಗೂ ತರಕಾರಿಗಳನ್ನು ಕೊಳ್ಳಬಹುದಾಗಿದೆ.
ಲೈಟ್ ಬಾಯ್ಸ್, ಪ್ರೊಡಕ್ಷನ್ ಅಸಿಸ್ಟೆಂಟ್ಸ್, ಸ್ಟಿಲ್ ಫೋಟೋಗ್ರಾಫರ್ಸ್, ಮ್ಯಾನೇಜರ್ಸ್, ಜೂನಿಯರ್ ಆರ್ಟಿಸ್ಟ್ಗಳು, ಮೇಕಪ್ ಕಲಾವಿದರು, ಅಸಿಸ್ಟೆಂಟ್ ಡೈರೆಕ್ಟರ್ಸ್, ಡ್ಯಾನ್ಸರ್ಸ್, ಫೈಟರ್ಸ್ ಹೀಗೆ ಪ್ರತೀ ವಲಯದ ತಂತ್ರಜ್ಞರು ಸಿನಿಮಾಗಳನ್ನೇ ನಂಬಿ ಜೀವನ ಕಟ್ಟಿಕೊಂಡಿದ್ದರು. ಇದೀಗ ಒಂದೇ ಸಮನೆ ಲಾಕ್ಡೌನ್ನಿಂದ ನಿಟ್ಟುಸಿರು ಬಿಡುವಂತಾಗಿದೆ. ಹಾಗಾಗಿ ಇವರೆಲ್ಲರಿಗೂ ಅಂಬಾನಿ ಕುಟುಂಬ ಔದಾರ್ಯ ತೋರಿ ನೆರವಿಗೆ ನಿಂತಿರೋದು ಖುಷಿಯ ವಿಚಾರ.