ಮುಂಬೈ: ಟೀಂ ಇಂಡಿಯಾದ 360° ಡಿಗ್ರಿ ಬ್ಯಾಟ್ಸ್ ಮನ್, ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಬಾಲಿವುಡ್ ನಟಿ, ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ರಿಲೇಶನ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ವಿಚಾರವಾಗಿ ಸ್ವತಃ ಅಥಿಯಾ ತಂದೆ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿದ್ದೇನು ಗೊತ್ತಾ!?
ಸುದ್ದಿಗೋಷ್ಠಿವೊಂದರಲ್ಲಿ ಕೆ.ಎಲ್.ರಾಹುಲ್ ಅವರೊಂದಿಗಿನ ಅಥಿಯಾ ಅವರ ಸಂಬಂಧದ ಬಗ್ಗೆ ಕೇಳಿದಾಗ, ಸುನಿಲ್ ಶೆಟ್ಟಿ ಅವರು, “ನಾನು ಕೆ.ಎಲ್.ರಾಹುಲ್ ಅವರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಬೇಕಿದ್ದರೆ ನೀವು ಅಥಿಯಾ ಅವರನ್ನು ಕೇಳಿ” ಎಂದು ಉತ್ತರಿಸಿದ್ದಾರೆ. ರಾಹುಲ್ ಹಾಗೂ ಅಥಿಯಾ ನಡುವಿನ ರಿಲೇಶನ್ ನಿಜವೇ ಎನ್ನುವುದನ್ನು ಹೇಳಿ. ಆಗ ನಾವು ಅದರ ಬಗ್ಗೆ ಮಾತನಾಡುತ್ತೇವೆ. ನಿಮಗೆ ಗೊತ್ತಿಲ್ಲದೆ ಹೇಗೆ ಕೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅಥಿಯಾ ಮತ್ತು ರಾಹುಲ್ ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಅವರು ತಮ್ಮ ಸ್ನೇಹಿತರೊಂದಿಗೆ ಹೊಸ ವರ್ಷದಂದು ಥೈಲ್ಯಾಂಡ್ ಗೆ ಹೋಗಿದ್ದರು. ಈ ವೇಳೆ ರಾಹುಲ್ ತಮ್ಮ ಇನ್ ಸ್ಟಾಗ್ರಾಮ್ ದಲ್ಲಿ ಅಥಿಯಾರೊಂದಿಗೆ ಇರುವ ಫೋಟೋ ಪೋಸ್ಟ್ ಮಾಡಿದ್ದರು.
ಫೋಟೋದಲ್ಲಿ ರಾಹುಲ್ ಹಳೆಯ ಮಾದರಿಯ ಟೆಲಿಫೋನ್ ಹಿಡಿದು ಗಂಭೀರವಾಗಿ ಕಾಣಿಸುತ್ತಿದ್ದರೆ, ಅಥಿಯಾ ಕ್ಯಾಮೆರಾಗೆ ಪೋಸ್ ಕೊಟ್ಟು ನಗೆ ಚೆಲ್ಲಿದ್ದರು. ಇತ್ತ ಫೋಟೋಗೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ ನೀಡಿ, ಸೂಪರ್ ಇಮೋಜಿ ಕಾಮೆಂಟ್ ಮಾಡಿದ್ದರು. ಸದ್ಯ ಸುನಿಲ್ ಶೆಟ್ಟಿ ಅವರ ಈ ಪ್ರತಿಕ್ರಿಯೆ ಕೆಎಲ್ ರಾಹುಲ್ ಅವರ ಅಭಿಮಾನಿಗಳಲ್ಲಿ ಹೊಸ ಸಂದೇಹಗಳಿಗೆ ಕಾರಣವಾಗಿದ್ದು, ಇಬ್ಬರು ನಡುವೆ ಏನೋ ನಡೆಯುತ್ತಿದೆ ಎಂಬ ಅಂಶವನ್ನು ತೆರೆದಿಟ್ಟಿತ್ತು. ಇತ್ತ ರಾಹುಲ್ ಗೆಳೆಯ, ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ ನೀಡಿ, `ತುಂಬಾ ಕ್ಯೂಟ್’ ಆಗಿದ್ದೀರಿ ಎಂದಿದ್ದರು. ಮತ್ತೊಬ್ಬ ಆಟಗಾರ ಶಿಖರ್ ಧವನ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಸುನಿಲ್ ಶೆಟ್ಟಿ ಈ ಹೇಳಿಕೆ ಚರ್ಚೆಗೆ ಗ್ರಾಮವಾಗಿದೆ.