ಕೊರೊನಾ ತಡೆಯಲು ಕಟ್ಟುನಿಟ್ಟಾಗಿ ಲಾಕ್ಡೌನ್ ಪಾಲಿಸುವಂತೆ ಸಿಎಂ ಯಡಿಯೂರಪ್ಪ ಮನವಿ
ಬೆಂಗಳೂರು : ಕೊರೋನಾ ವೈರಸ್ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿತ್ತು. ಇದರ ಹೊರತಾಗಿಯೂ ಸಾಕಷ್ಟು ಸೋಂಕಿತರು ಸಂಖ್ಯೆ ದಾಖಲಾಗುತ್ತಲೇ ಇದೆ. ಇದರಿಂದ ದೇಶದ ಜನರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಇದಕ್ಕೆ ಸೂಕ್ತವಾದ ಕ್ರಮವನ್ನು ಕೈಗೊಂಡಿದ್ದಾರೆ ಅಷ್ಟಕ್ಕೂ ಆ ಕ್ರಮ ಏನು ಗೊತ್ತಾ?
ಕೋವಿಡ್-19 ಪ್ರಕರಣಗಳ ಸಂಖ್ಯೆ ಕ್ಷಿಪ್ರವಾಗಿ ಏರಿಕೆಯಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು ರಾಜ್ಯದ ಜನತೆ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ’ವಿಶ್ವದಾದ್ಯಂತ ಕೋವಿಡ್ - 19 ಸೋಂಕಿನಿಂದ ಉಂಟಾಗುತ್ತಿರುವ ಹಾನಿ ಎಲ್ಲರಿಗೂ ತಿಳಿದಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನರ ಜೀವ ರಕ್ಷಣೆಗಾಗಿ ದೇಶಾದ್ಯಂತ ೧೪.೦೪.೨೦೨೦ ರವರೆಗೆ ಲಾಕ್ಡೌನ್ ಘೋಷಣೆ ಮಾಡಿದ್ದಾರೆ.
ನಮ್ಮ ರಾಜ್ಯದಲ್ಲಿಯೂ ಸಹ ಬೀದರ್, ಮೈಸೂರು, ಮಂಗಳೂರು, ಬೆಂಗಳೂರು ನಗರ, ಕಲಬುರಗಿ ಜಿಲ್ಲೆಗಳಲ್ಲಿ ವೈರಸ್ ಪೀಡಿತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಿದೆ. ಈ ವೈರಸ್ ನಿಯಂತ್ರಣಕ್ಕಾಗಿ ಗಡಿ ಪ್ರದೇಶಗಳನ್ನು ಮುಚ್ಚುವುದು, ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ಓಡಾಡುವಂತಹ ಪ್ರದೇಶಗಳಿಗೆ ನಿರ್ಬಂಧಗಳನ್ನು ವಿಧಿಸಿರುವುದು, ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರದಂತೆ ನಿರ್ಬಂಧಿಸುವುದರ ಜೊತೆಗೆ ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದ ಜನತೆ ಲಾಕ್ ಡೌನ್ ನ ಹಿಂದಿನ ಆಶಯವನ್ನು ಹಾಗೂ ಲಾಕ್ ಡೌನ್ ಉಲ್ಲಂಘನೆಯಿಂದ ದೇಶಕ್ಕೆ ಎದುರಾಗಬಹುದಾದ ಅಪಾಯವನ್ನು ಅರಿತುಕೊಂಡು ಕಟ್ಟುನಿಟ್ಟಾಗಿ ಲಾಕ್ ಡೌನ್ ಆದೇಶ ಪಾಲಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಕೋವಿಡ್-19 ನಿಯಂತ್ರಣಕ್ಕೆ ಸಿಗದ ಸ್ಥಿತಿ ತಲುಪಿದೆ. ಪ್ರಸ್ತುತ ಮಾನ್ಯ ಪ್ರಧಾನ ಮಂತ್ರಿಯವರು ಸೂಚಿಸಿರುವ ದೇಶವ್ಯಾಪ್ತಿ ಲಾಕ್ಡೌನ್ ಅವಧಿಯು ಏಪ್ರಿಲ್ 14 ರಂದು ಮುಕ್ತಾಯಗೊಳ್ಳುತ್ತಿದ್ದು, ಈ ಲಾಕ್ಡೌನನ್ನು ವಿಸ್ತರಿಸಬೇಕೋ ಬೇಡವೋ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆದುದರಿಂದ ಈ ಕುರಿತಂತೆ ಸಲಹೆ ಸೂಚನೆಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.