0,6,6,6,6,6. ದಾಖಲೆಯ 5 ಸಿಕ್ಸ್ ಸಿಡಿಸಿದ ಕೆಕೆಆರ್ ಬ್ಯಾಟ್ಸ್‌ಮನ್‌

Soma shekhar
ಬ್ರಿಸ್ಬೇನ್‌: ಕಳೆದ ತಿಂಗಳು 13ನೇ ಆವೃತ್ತಿಯ ಐಪಿಎಲ್‌ ಸಲುವಾಗಿ ನಡೆದ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಇಂಗ್ಲೆಂಡ್‌ನ ಯುವ ಪ್ರತಿಭೆ ಟಾಮ್‌ ಬ್ಯಾನ್ಟನ್‌  ಅವರನ್ನು 1 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿತ್ತು. ಇದೀಗ ಆ ಪ್ಲೇಯರ್ ಒಂದೇ ಓವರ್ ನಲ್ಲಿ ಬರೋಬ್ಬರಿ 5 ಸಿಕ್ಸ್ ಸಿಡಿಸುವ ದಾಖಲೆ ಬರೆದಿದ್ದಾರೆ. 
 
ಒಂದೇ ಓವರ್ ನಲ್ಲಿ ಕ್ರಮವಾಗಿ 0,6,6,6,6,6 ಸಿಡಿಸುವ ಮೂಲಕ ಮುಂದಿನ ಐಪಿಎಲ್ ನಲ್ಲಿ ಅಬ್ಬರಿಸುವ ಎಲ್ಲಾ ಮುನ್ಸೂಚನೆಗಳನ್ನು ನೀಡಿದ್ದಾರೆ.ಕೌಂಟಿಯಲ್ಲಿ ಸಮರ್ಸೆಟ್‌ ಕೌಂಟಿ ಕ್ಲಬ್‌ ಪರ ಆಡುವ 21 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಬ್ಯಾನ್ಟನ್‌, ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‌ ಬ್ಯಾಷ್‌ ಲೀಗ್‌ ಟಿ20 ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಬ್ಯಾನ್ಟನ್‌, ಸೋಮವಾರ ನಡೆದ ಸಿಡ್ನಿ ಥಂಡರ್ಸ್‌ ವಿರುದ್ಧದ ಪಂದ್ಯದಲ್ಲಿ ಓವರ್‌ ಒಂದರಲ್ಲೇ ಸತತ 5 ಸಿಕ್ಸರ್‌ ಸಿಡಿಸಿ ಆರ್ಭಟಿಸಿದ್ದಾರೆ.
 
ಅಷ್ಟೇ ಅಲ್ಲದೆ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿದ ದಾಖಲೆಯಿಂದ ಅಲ್ಪದರಲ್ಲೇ ವಂಚಿತರಾಗಿದ್ದಾರೆ. ಭಾನುವಾರವಷ್ಟೇ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ ಲಿಯೋ ಕಾರ್ಟರ್‌, 6 ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸಿ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 4ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಬ್ಯಾನ್ಟನ್‌, ತಮ್ಮ ಈ ಅದ್ಭುತ ಇನಿಂಗ್ಸ್‌ ವೇಳೆ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಬಿಬಿಎಲ್‌ ಇತಿಹಾಸದಲ್ಲಿ 2ನೇ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ಬರೆದಿದ್ದಾರೆ. 
 
ಬ್ಯಾನ್ಟನ್‌ ಅಂತಿಮವಾಗಿ 19 ಎಸೆತಗಳಲ್ಲಿ 56 ರನ್‌ಗಳನ್ನು ಬಾರಿಸಿ ಔಟಾದರು. ಪರಿಣಾಮ ಮಳೆ ಭಾದಿತ ಪಂದ್ಯದಲ್ಲಿ ಬ್ರಿಸ್ಬೇನ್‌ ಹೀಟ್‌ ತಂಡ ತನ್ನ ಪಾಲಿನ 8 ಓವರ್‌ಗಳಲ್ಲಿ 4 ವಿಕೆಟ್‌ಗೆ 119 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತು. ಬಳಿಕ ಸಿಡ್ನಿ ತಂಡಕ್ಕೆ 5 ಓವರ್‌ಗಳಲ್ಲಿ ಪರಿಷ್ಕೃತ 77 ರನ್‌ಗಳ ಗುರಿ ನೀಡಲಾಗಿತ್ತು. ಥಂಡರ್ಸ್‌, 5 ಓವರ್‌ಗೆ 4 ವಿಕೆಟ್‌ ನಷ್ಟದಲ್ಲಿ 60 ರನ್‌ ಗಳಿಸಿ 16 ರನ್‌ಗಳಿಂದ ಸೋಲೊಪ್ಪಿಕೊಂಡಿತು.
 
 

Find Out More:

Related Articles: