ಐದನೇ ಅನ್ ಲಾಕ್ ಪ್ರಕ್ರಿಯೆಯ ಮಾರ್ಗಸೂಚಿಯಲ್ಲಿರುವ ಅಂಶಗಳೇನು..?
ಕೋವಿಡ್ 19 ಸಂಬಂಧಿತ ಅನ್ ಲಾಕ್ ಪ್ರಕ್ರಿಯೆಯನ್ನು ಇನ್ನಷ್ಟು ಸಡಿಲಗೊಳಿಸಿರುವ ಕೇಂದ್ರ ಗೃಹ ಸಚಿವಾಲಯವು ಬಹು ನಿರೀಕ್ಷಿತ ಸಿನೆಮಾ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳ ಭಾಗಶಃ ಕಾರ್ಯನಿರ್ವಹಣೆಗೆ ಅನುಮತಿ ನೀಡಿದೆ. ಈ ಅನ್ ಲಾಕ್ 5 ಅಕ್ಟೋಬರ್ 15ರಿಂದ ಜಾರಿಗೊಳ್ಳಲಿದೆ.
ಶಾಲೆ ಮತ್ತು ಕೋಚಿಂಗ್ ಸೆಂಟರ್ ಗಳನ್ನೂ ಸಹ ಅಕ್ಟೋಬರ್ 15ರ ನಂತರ ತೆರೆಯಲು ಕೇಂದ್ರ ಅನುಮತಿ ನೀಡಿದೆ. ಆದರೆ ಈ ಕುರಿತಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಆಯಾ ರಾಜ್ಯಗಳಿಗೇ ನೀಡಲಾಗಿದೆ.ಅನ್ ಲಾಕ್ 5ರ ನಿಯಮಾವಳಿಗಳು ಹೀಗಿವೆ:
– ಸಿನೆಮಾ ಮಂದಿರಗಳು, ಮಲ್ಟಿಪ್ಲೆಕ್ಸ್ ಗಳು ಮತ್ತು ರಂಗ ಮಂದಿರಗಳನ್ನು ಅವುಗಳ ಒಟ್ಟು ಆಸನ ಸಾಮರ್ಥ್ಯದ 50% ಪ್ರೇಕ್ಷಕ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿ.
ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸದ್ಯದಲ್ಲೇ SOP ಹೊರಡಿಸಲಿದೆ.
– ಬ್ಯುಸಿನೆಸ್ ಟು ಬ್ಯುಸಿನೆಸ್ (B2B) ಪ್ರದರ್ಶನಗಳನ್ನು ತೆರೆಯಲು ಅನುಮತಿ ಮತ್ತು ಇದಕ್ಕಾಗಿ ವಾಣಿಜ್ಯ ಸಚಿವಾಲಯವು ಸದ್ಯದಲ್ಲೇ SOP ಹೊರಡಿಸಲಿದೆ.
– ಕ್ರೀಡಾಪಟುಗಳ ತರಬೇತಿಗಾಗಿ ಸ್ವಿಮ್ಮಿಂಗ್ ಪೂಲ್ ಗಳನ್ನು ತೆರೆಯಲು ಅನುಮತಿ. ಇದಕ್ಕಾಗಿ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯವು SOP ಹೊರಡಿಸಲಿದೆ.
– ಮನರಂಜನಾ ಪಾರ್ಕ್ ಗಳು ಹಾಗೂ ಇದೇ ರೀತಿಯ ಮನರಂಜನಾ ಸ್ಥಳಗಳನ್ನು ತೆರೆಯಲು ಅನುಮತಿ. ಇದಕ್ಕೆ ಸಂಬಂಧಿಸಿದ SOPಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಲಿದೆ.
– ಶಾಲೆಗಳು ಮತ್ತು ಕೋಚಿಂಗ್ ಇನ್ಸ್ಟಿಟ್ಯೂಟ್ ಗಳನ್ನು ಗ್ರೇಡ್ ಆಧಾರದಲ್ಲಿ ಅಕ್ಟೋಬರ್ 15ರ ಬಳಿಕ ತೆರೆಯುವ ಸಂಬಂಧ ಆಯಾಯ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಗಿದೆ.
– ಸಂಬಂಧಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೊಂದಿಗೆ ಸೂಕ್ತವಾಗಿ ಚರ್ಚಿಸಿ ಮತ್ತು ಕೋವಿಡ್ 19 ಪರಿಸ್ಥಿತಿಯನ್ನು ನಿಭಾಯಿಸಲು ಅಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
– ಈಗಾಗಲೇ ಜಾರಿಯಲ್ಲಿರುವ ಆನ್ ಲೈನ್ / ದೂರ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುವಂತೆಯೂ ಸೂಚಿಸಲಾಗಿದೆ. – ಆನ್ ಲೈನ್ ಶಿಕ್ಷಣವನ್ನು ನೀಡುತ್ತಿರುವ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಬದಲು ಆನ್ ಲೈನ್ ಶಿಕ್ಷಣವನ್ನೇ ಆಯ್ದುಕೊಳ್ಳಲು ಇಚ್ಛಿಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣದ ಆಯ್ಕೆಯನ್ನು ನೀಡುವಂತೆಯೂ ಈ ನಿಯಮಾವಳಿಯಲ್ಲಿ ಸೂಚಿಸಲಾಗಿದೆ.
– ಹೆತ್ತವರ ಲಿಖಿತ ಅನುಮತಿಯಿದ್ದಲ್ಲಿ ಮಾತ್ರವೇ ವಿದ್ಯಾರ್ಥಿಗಳು ಶಾಲೆ ಶಿಕ್ಷಣ ಸಂಸ್ಥೆಗಳ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ.
– ಶಿಕ್ಷಣ ಸಂಸ್ಥೆಗಳು ಹಾಜರಾತಿ ವಿಧಾನವನ್ನು ಅನ್ವಯಿಸಬಾರದು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸುವ ಅಥವಾ ಕಳುಹಿಸದೇ ಇರುವ ನಿರ್ಧಾರವನ್ನು ಪೋಷಕರಿಗೇ ನೀಡಬೇಕು.
– ಕೇಂದ್ರ ಗೃಹ ಸಚಿವಾಲಯದೊಂದಿಗೆ ಚರ್ಚಿಸಿದ ಬಳಿಕ ಶಿಕ್ಷಣ ಸಚಿವಾಲಯವು ಕಾಲೇಜುಗಳು/ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಅವಧಿಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
– ಕೇಂದ್ರ ಗೃಹ ಸಚಿವಾಲಯದೊಂದಿಗೆ ಚರ್ಚಿಸಿದ ಬಳಿಕ ಶಿಕ್ಷಣ ಸಚಿವಾಲಯವು ಕಾಲೇಜುಗಳು/ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಅವಧಿಗೆ ಸಂಬಂಧಿಸಿದ ನಿರ್ಧಾರವನ್ನು ತೆಗೆದುಕೊಳ್ಳಲಿದೆ.