ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾಕ್ಕೆ ಭಾರತ ನೀಡಿದ ಎಚ್ಚರಿಕೆ ಏನು ಗೊತ್ತಾ..?

Soma shekhar
ಕಾಶ್ಮೀರಕ್ಕೆ ಇದ್ದ 370ನೇ ವಿಧಿಯ ವಿಶೇಷ ಸ್ಥಾನ ಮಾನವನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯಗಳು ಚರ್ಚೆಯಾಗುತ್ತಿದೆ. ಈ ವಿಷಯವನ್ನು ಪದೇ ಪದೇ ಚರ್ಚಿಸಲು ಪಾಕಿಸ್ತಾನ ಹಾತೊರೆಯುತ್ತಿದೆ. ಇದಕ್ಕೆ ಬೆಂಬಲವಾಗಿ ಚೀನಾ ನೆರವಿಗೆ ನಿಂತಿದೆ. ಅದರಂತೆ ಇ ಭಾರಿಯೂ ಕೂಡ ಈ  ವಿಷಯ ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಚರ್ಚೆಯಾಯಿತು ಇದಕ್ಕೆ ಭಾರತ  ತಕ್ಕ ಉತ್ತರವನ್ನು ಚೀನಾಕ್ಕೆ ನೀಡಿದೆ. 

 


ಹೌದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ಸಮಸ್ಯೆ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ನೆರೆಯ ಚೀನಾಕ್ಕೆ ಗುರುವಾರ ಭಾರತವು ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ತಿರುಗೇಟು ನೀಡಿದೆ.


ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪದೇ ಪದೇ ಮುನ್ನೆಲೆಗೆ ತರಲು ವಿಫಲ ಯತ್ನ ನಡೆಸುತ್ತಿರುವ ಚೀನಾ ತನ್ನ ಸತತ ವೈಫಲ್ಯಗಳಿಂದಾದರೂ ಪಾಠ ಕಲಿಯಲಿ ಎಂದು ಬುದ್ಧಿಮಾತು ಹೇಳಿದೆ.

ಬುಧವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನದ ಮೂಲಕ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಲು ಯತ್ನಿಸಿದ ಚೀನಾದ ಪ್ರಯತ್ನಗಳು ನಿರೀಕ್ಷಿತ ಫಲ ನೀಡಲಿಲ್ಲ.


'ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಮಸ್ಯೆಯನ್ನು ಭದ್ರತಾ ಮಂಡಳಿಯಲ್ಲಿ ಚರ್ಚಿಸುವುದು ಸರಿಯಲ್ಲ' ಎಂದು ಬಹುತೇಕ ಸದಸ್ಯ ರಾಷ್ಟ್ರಗಳು ವಾದಿಸಿದವು. ಹಾಗಾಗಿ ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಗಂಭೀರ ಚರ್ಚೆ ನಡೆಯಲಿಲ್ಲ. ಅನೌಪಚಾರಿಕ ಚರ್ಚೆಗಳು ದಾಖಲೆಗೂ ಸೇರಲಿಲ್ಲ. ಇದರಿಂದ ಪಾಕಿಸ್ತಾನ ಮತ್ತು ಚೀನಾ ತೀವ್ರ ಮುಖಭಂಗ ಅನುಭವಿಸಬೇಕಾಯಿತು.


'ಭಾರತದ ಆಂತರಿಕ ವಿಷಯವನ್ನು ಚೀನಾ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಚೀನಾದ ಇಂಥ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಸಮುದಾಯದಿಂದ ನಿರೀಕ್ಷಿತ ಬೆಂಬಲ ದೊರೆತಿರಲಿಲ್ಲ' ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ್‌ ಪ್ರತಿಕ್ರಿಯಿಸಿದ್ದಾರೆ.


ಭದ್ರತಾ ಮಂಡಳಿಯ ಐವರು ಕಾಯಂ ಸದಸ್ಯ ರಾಷ್ಟ್ರಗಳ ಪೈಕಿ ಒಂದಾಗಿರುವ ಚೀನಾದ ಬೆಂಬಲ ಪಡೆದು ಪಾಕಿಸ್ತಾನವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಮುಜುಗರ ಉಂಟು ಮಾಡುವ ಯತ್ನಕ್ಕೆ ಕೈ ಹಾಕುತ್ತಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಒಂದು ವರ್ಷ ಸಂದರ್ಭದಲ್ಲಿಯೇ ಪಾಕಿಸ್ತಾನ ಇಂಥ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿತ್ತು.


 

ವಿಶ್ವಸಂಸ್ಥೆಯಲ್ಲಿ ಏನು ನಡೆಯಿತು?


ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ರಷ್ಯಾ, ಫ್ರಾನ್ಸ್‌, ಬ್ರಿಟನ್‌ ಮತ್ತು ಅಮೆರಿಕವು ಕಾಶ್ಮೀರ ಸಮಸ್ಯೆಯ ಔಪಚಾರಿಕ ಚರ್ಚೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಚೀನಾದ ಪ್ರಸ್ತಾವ ಬಿದ್ದು ಹೋಯಿತು. ಕಾಯಂ ಸದಸ್ಯ ರಾಷ್ಟ್ರವಲ್ಲದ ಟರ್ಕಿ ಮಾತ್ರ ಚೀನಾದ ಪ್ರಸ್ತಾವಕ್ಕೆ ಬೆಂಬಲ ನೀಡಿತು.


ಭಾರತದ ನಿಲುವು


ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್‌ 5ರಂದು ರದ್ದುಗೊಳಿಸಿದ ನಂತರ ಚೀನಾ ಮೂರು ಬಾರಿ ಕಾಶ್ಮೀರ ಸಮಸ್ಯೆಯನ್ನು ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸುವ ಯತ್ನ ಮಾಡಿದೆ. ಅದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಲೇ ಬಂದಿದೆ.



1972ರ ಶಿಮ್ಲಾ ಒಪ್ಪಂದ ಮತ್ತು 1999ರ ಲಾಹೋರ್‌ ನಿರ್ಣಯಗಳ ಅನ್ವಯ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತವೆ. ವಿಶ್ವಸಂಸ್ಥೆ ಅಥವಾ ಯಾವುದೇ ಮೂರನೇ ರಾಷ್ಟ್ರಗಳು ಈ ವಿಷಯದಲ್ಲಿ ಮೂಗು ತೂರಿಸುವುದು ಇಷ್ಟವಿಲ್ಲ ಎಂದು ಭಾರತ ತನ್ನ ನಿಲುವನ್ನು ಪ್ರತಿಪಾದಿಸುತ್ತ ಬಂದಿದೆ.


ಪಾಕ್‌ ವಾದ


ಜಮ್ಮ ಮತ್ತು ಕಾಶ್ಮೀರದಲ್ಲಿ ಭಾರತದ ಭದ್ರತಾ ಪಡೆಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತ ಬಂದಿವೆ. ಈ ವಿಷಯವನ್ನು ಕೂಡಲೇ ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಬುಧವಾರ ನಡೆದ ಸಭೆಯಲ್ಲಿ ಚೀನಾ ಈ ವಿಷಯದ ಕುರಿತು ಚರ್ಚೆಗೆ ಪಟ್ಟು ಹಿಡಿದಿತ್ತು.


Find Out More:

Related Articles: