
ಕೃಷಿಯ ಸಂಬಂದಪಟ್ಟ ಮಸೂದೆಗಳ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು..?
ಹೌದು ಪ್ರತಿಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆಯ ನಡುವೆಯೂ ಇಂದು ಕೃಷಿಗೆ ಸಂಬಂಧಪಟ್ಟ ಎರಡು ಮಸೂದೆಗಳು ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಅನುಮೋದನೆಗೊಂಡಿದ್ದು, ರಾಷ್ಟ್ರಪತಿ ಅಂಕಿತವೊಂದೇ ಬಾಕಿ ಇದೆ. ಆದರೆ ಇದೀಗ ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಬಾರದು..ಅದು ಕಾಯ್ದೆಯಾಗಬಾರದು ಎಂಬ ಕೂಗು ಕೇಳಿಬರುತ್ತಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಬಿಲ್ ಪಾಸ್ ಆದ ಬಗ್ಗೆ ಟ್ವೀಟ್ ಮಾಡಿ, ಇದೊಂದು ಐತಿಹಾಸಿಕ ಕ್ಷಣ ಎಂದು ಹೇಳಿದ್ದಾರೆ. 'ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020'ಹಾಗೂ 'ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿಯ ಒಪ್ಪಂದ ಮತ್ತು ಕೃಷಿ ಸೇವಾ ಮಸೂದೆ-2020' ಎಂಬ ಎರಡೂ ಮಸೂದೆಗಳು ಇಂದು ಪಾಸ್ ಆಗಿದ್ದು ಭಾರತದ ಕೃಷಿ ಇತಿಹಾಸದಲ್ಲಿಯೇ ಒಂದು ಪರ್ವಕಾಲ. ಪ್ರಮುಖ ಬಿಲ್ಗಳು ಅನುಮೋದನೆಗೊಂಡಿದ್ದಕ್ಕೆ ಕೋಟ್ಯಂತರ ಶ್ರಮಿಕ ರೈತರಿಗೆ ಅಭಿನಂದನೆಗಳು. ಈ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಸಂಪೂರ್ಣ ಬದಲಾವಣೆ ತರುವ ಮೂಲಕ ರೈತರ ಕೈಗೆ ಅಧಿಕಾರ ನೀಡಲಿವೆ ಎಂದು ಹೇಳಿದರು.
ಅನೇಕ ದಶಕಗಳಿಂದಲೂ ನಮ್ಮ ರೈತರು ವಿವಿಧ ನಿರ್ಬಂಧನೆಗಳಿಂದ ಬಂಧಿತರಾಗಿದ್ದರು, ಮಧ್ಯವರ್ತಿಗಳಿಂದ ಹಿಂಸೆ ಅನುಭವಿಸುತ್ತಿದ್ದರು. ಆದರೆ ಈ ಮಸೂದೆಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಯತ್ನವನ್ನು ಉತ್ತೇಜಿಸುವ ಜತೆ, ಅವರಿಗೆ ಇನ್ನಷ್ಟು ಅಭಿವೃದ್ಧಿ ಹೊಂದುವ ಅವಕಾಶ ಸೃಷ್ಟಿಸುತ್ತವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ನಮ್ಮ ಕೃಷಿ ಕ್ಷೇತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯ ಹೆಚ್ಚಾಗಿದೆ. ಇದೀಗ ಹೊಸ ಮಸೂದೆಗಳಿಂದ ರೈತರು ಭವಿಷ್ಯದಲ್ಲಿ ಸುಲಭವಾಗಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ ಮಾಡಬಹುದು. ಇದರಿಂದ ಉತ್ಪಾದನೆಯೂ ಹೆಚ್ಚುತ್ತದೆ. ಇದೊಂದು ಸ್ವಾಗತಾರ್ಹ ಕ್ರಮ ಎಂದಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹಾಗೂ ಸರ್ಕಾರದಿಂದ ಖರೀದಿ ವ್ಯವಸ್ಥೆ ಮುಂದುವರಿಯಲಿದೆ. ನಾವು ರೈತರ ಸೇವೆಗಾಗಿ ಇದ್ದೇವೆ. ಕೃಷಿಕರ ಒಳಿತಿಗಾಗಿ ಅಗತ್ಯ ಇರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು..ಎಲ್ಲ ರೀತಿಯ ಬೆಂಬಲ ನೀಡಲಾಗುವುದು. ಮುಂಬರುವ ಪೀಳಿಗೆಯ ರೈತರಿಗೆ ಅತ್ಯುತ್ತಮ ಜೀವನ ಕಟ್ಟಿಕೊಡುವುದು ನಮ್ಮ ಆಶಯ ಎಂದು ಪ್ರಧಾನಿ ತಿಳಿಸಿದ್ದಾರೆ.