ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರು ಏನು ಹೇಳಿದ್ದಾರೆ ಗೊತ್ತಾ..?
ಕೊರೋನಾ ಬಿಕ್ಕಟ್ಟಿನಿಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಮುಂದುಕ್ಕೆ ಹಾಕುತ್ತಲೇ ಇದ್ದ ಶಿಕ್ಷಣ ಇಲಾಖೆ ಲಾಕ್ ಡೌನ್ ಮುಗಿದ ನಂತರ ಜೂನ್ 25ರಿಂದ ಜುಲೈ 3ರವರೆಗೆ ಪರೀಕ್ಷೆಯ ದಿನಾಂಕವನ್ನು ನಿಗದಿ ಪಡಿಸಿದ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಇದೆಲ್ಲದರ ಪರಿಣಾಮದಿಂದ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಎಲ್ಲಾ ವಿಷಯದ ಪರೀಕ್ಷೆಯನ್ನು ಬರೆದಿದ್ದಾರೆ. ಈ ಕುರಿತು ಶಿಕ್ಷಣ ಸಚಿವ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಏನು ಹೇಳಿದ್ದಾರೆ ಗೊತ್ತಾ..?
ಜೂನ್ 25 ರಿಂದ ಆರಂಭವಾಗಿ ಜುಲೈ 3 ರ ವರೆಗೆ ನಡೆದ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಹಾಗೂ ಸಹಕರಿಸಿದ ಪೋಷಕರು, ವಿವಿಧ ಇಲಾಖೆಗಳು ಮತ್ತು ಜಿಲ್ಲಾಡಳಿತಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿನಂದನೆ ತಿಳಿಸಿದ್ದಾರೆ.
ಕೊನೆಯ ದಿನದ ಪರೀಕ್ಷೆಯ ನಂತರ ಶುಕ್ರವಾರ ಸಂಜೆ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರು ದಿನಗಳ ಅವಧಿಯ ಪರೀಕ್ಷೆಗಳಲ್ಲಿ ಪ್ರತಿದಿನ ಸರಾಸರಿ 7.5 ಲಕ್ಷ ವಿದ್ಯಾರ್ಥಿಗಳು ಯಾವುದೇ ಸಮಸ್ಯೆಯಿಲ್ಲದ ರೀತಿಯಲ್ಲಿ ಪರೀಕ್ಷೆಗಳನ್ನು ಧೈರ್ಯವಾಗಿ, ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಎದುರಿಸಿದ್ದಾರೆ ಎಂದು ಹೇಳಿದರು.
ನಮಗೆ ಕೊರೊನಾ ವೈರಸ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುವುದು ಬಹುದೊಡ್ಡ ಸವಾಲಾಗಿತ್ತು. ಅದು ನಮ್ಮ ಪ್ರತಿಷ್ಠೆಯ ಪ್ರಶ್ನೆಯಾಗದೇ, ವಿದ್ಯಾರ್ಥಿಗಳ ಹಿತ ಹಾಗೂ ಸುರಕ್ಷತೆಯೇ ಅತ್ಯಂತ ಮುಖ್ಯವಾಗಿತ್ತು. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾವು ಸರ್ಕಾರದ ಪ್ರಯತ್ನವಾಗಿ ಬಹು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಇದು ನನಗೆ ನಿಜಕ್ಕೂ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
ಶಿಕ್ಷಣ ಇಲಾಖೆಯು ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಒಂದು ಇತಿಹಾಸವನ್ನು ಸೃಷ್ಟಿಸಿದೆ. ನ್ಯಾಯಾಲಯಗಳಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಆಗಲೇ ನಾನು ರಾಜ್ಯಾದ್ಯಂತ ಕೋವಿಡ್ ಸಮಯವೆಂದೂ ಲೆಕ್ಕಿಸದೇ ಸಂಚರಿಸಲು ಶುರು ಮಾಡಿದೆ. ನಾನು ಭೇಟಿ ಮಾಡಿದ ಅಸಂಖ್ಯ ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಪರೀಕ್ಷೆ ಬೇಕು ಎಂದು ನನ್ನನ್ನು ಒತ್ತಾಯಿಸಿದ್ದರು ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕಾರಿಗಳು ಕಷ್ಟದ ಸಂದರ್ಭದಲ್ಲಿಯೂ ತಾವು ದೃತಿಗೆಡದೇ ಈ ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಆತ್ಮವಿಶ್ವಾಸವನ್ನು ತೋರಿದರು. ಮತ್ತೆ ನಾನು ಬೆಂಗಳೂರಿಗೆ ವಾಪಸ್ಸು ಬಂದು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡುವ ನಿಟ್ಟಿನಲ್ಲಿ ಭರವಸೆಯ ಉತ್ತರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ನಮ್ಮ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದಾಗಿ ಸಚಿವ ಸುರೇಶ್ ಕುಮಾರ್ ಪರೀಕ್ಷೆಗೆ ಸಂಬಂಧಿಸಿದ ವಿವಿಧ ಹಂತಗಳನ್ನು ವಿವರಿಸಿದರು.