
ಕನ್ನಡ ಭಾಷೆಯನ್ನು ಉಳಿಸಲು ಶಿಕ್ಷಣ ಸಚಿವರು ರಾಜ್ಯದ ಎಲ್ಲಾ ಶಾಲೆಗಳಿಗೆ ನೀಡಿದ ಎಚ್ಚರಿಕೆ ಏನು..?
ಇಂದು ಕರ್ನಾಟಕದಲ್ಲಿರುವ ಅದೆಷ್ಟೋ ಆಂಗ್ಲ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಮೂಲೆಗುಂಪು ಮಾಡಿದ್ದಾರೆ. ಇದರ ಜೊತೆಗೆ ಇತ್ತೀಚಿನ ದಿನದಲ್ಲಿ ಕನ್ನಡ ಶಾಲೆಗಳನ್ನು ಮಕ್ಕಳಿಲ್ಲದೆ ಮುಚ್ಚಲಾಗುತ್ತಿದೆ ಪರಿಸ್ಥಿತಿ ಹೀಗಿರುವಾಗ ಕನ್ನಡ ಭಾಷೆಯ ಪರಿಸ್ಥಿತಿ ಹೇಗಾಗಿರಬಹುದು ಒಮ್ಮೆ ಯೋಚಿಸಿ ನೋಡಿ. ಇದಕ್ಕೆ ಪರಿಹಾರ ಎಂಬಂತೆ ಶಿಕ್ಷಣ ಸಚಿವರಾದ ಎಸ್ ಸುರೇಶ್ ಕುಮಾರ್ ಅವರು ರಾಜ್ಯದ ಎಲ್ಲಾ ಶಾಲೆಗಳಿಗೆ ಖಡಕ್ ಎಚ್ಚರಿಕೆ ಯೊಂದನ್ನು ನೀಡಿದ್ದಾರೆ. ಅಷ್ಟಕ್ಕೂ ಸುರೇಶ್ ಕುಮಾರ್ ಅವರು ನೀಡಿದ ಆ ಒಂದು ಎಚ್ಚರಿಕೆ ಏನು..?
ಕನ್ನಡ ನೆಲದಲ್ಲಿ ನಡೆಯುವಂತಹ ಯಾವುದೇ ಶಾಲೆಯಾಗಿರಲಿ ಅಲ್ಲಿ ಕನ್ನಡ ಭಾಷೆಯ ಬೋಧನೆ ಕಡ್ಡಾಯವಾಗಿ ಆಗಲೇಬೇಕು. ಈ ಸಂಬಂಧದ ಕಡ್ಡಾಯ ಕನ್ನಡ ಕಲಿಕಾ ವಿಧೇಯಕ-2015ರ ಅನುಷ್ಠಾನಕ್ಕೆ ಅನಾದರ ಇಲ್ಲವೇ ನಿರ್ಲಕ್ಷ್ಯ ತೋರುವ ಶಿಕ್ಷಣಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಬುಧವಾರ ಕಡ್ಡಾಯ ಕನ್ನಡ ಕಲಿಕಾ ವಿಧೇಯಕ-2015ರ ಅನುಷ್ಠಾನದ ಪರಾಮಾರ್ಶೆ ಕುರಿತು ರಾಜ್ಯದ ಎಲ್ಲ ಡಿಡಿಪಿಐಗಳೊಂದಿಗೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇದಕ್ಕಾಗಿ 2015ರಲ್ಲಿ ಜಾರಿಗೆ ತರಲಾದ ಕನ್ನಡ ಕಲಿಕಾ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಕಟಿಬದ್ಧವಾಗಿದೆ ಎಂದು ಹೇಳಿದರು.
ಈ ನೆಲದ ಕಾನೂನಿನ ಅನುಷ್ಠಾನದ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಇಲಾಖೆಯೊಂದಿಗೆ ನಿರ್ವಹಿಸುತ್ತಿರುವ ಸಮನ್ವಯ ಜವಾಬ್ದಾರಿ ನಿಜಕ್ಕೂ ಪ್ರೇರಣಾದಾಯಕ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಜೋಡೆತ್ತಿನಂತೆ ಕೆಲಸ ಮಾಡಲಿವೆ ಎಂದು ಸುರೇಶ್ ಕುಮಾರ್ ಹೇಳಿದರು.
ಕನ್ನಡ ನೆಲದಲ್ಲಿ ಓದುವ ಪ್ರತಿಯೊಂದು ಮಗುವೂ ಕನ್ನಡವನ್ನು ಕಲಿಯಬೇಕು. ಅರ್ಹ ಶಿಕ್ಷಕರು ಈ ಮಕ್ಕಳಿಗೆ ಕನ್ನಡ ಕಲಿಸಬೇಕು. ಇದನ್ನು ಕರ್ನಾಟಕದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಥೈಸಿಕೊಂಡು ಮಕ್ಕಳ ಹಿತದೃಷ್ಟಿಯಿಂದ ಸರ್ಕಾರದ ಈ ಕ್ರಮವನ್ನು ಬೆಂಬಲಿಸಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವರದಿಯಂತೆ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ಉಳಿಸಿಕೊಳ್ಳಲು ತಮ್ಮದೇ ಆದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ. ಈಗ ಕೂಲಿ ಮಾಡಿ ಜೀವನ ಸಾಗಿಸುವವರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಅದಕ್ಕೆ ಅವರು ತಮ್ಮ ದುಡಿಮೆಯ ಶೇ. 40 ಭಾಗ ವೆಚ್ಚ ಮಾಡುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳನ್ನೇ ಸಬಲೀಕರಣ ಮಾಡಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಗುಣಮಟ್ಟವನ್ನು ಕಾಪಾಡಿಕೊಂಡರೆ ಅವರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಕ್ಕೆ ಮುಂದಾದರೆ ಅವರೆಲ್ಲಾ ಖಾಸಗಿ ಶಾಲೆಗಳಿವೆ ವೆಚ್ಚ ಮಾಡುವ ಶೇ. 40 ಭಾಗ ಹಣವನ್ನು ತಮ್ಮ ಕುಟುಂಬದ ಅಭಿವೃದ್ಧಿಗೆ ವಿನಿಯೋಗಿಸಬಹುದಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.