ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಇ. ಡಿ ನಡೆಸುತ್ತಿರುವ ವಿಚಾರಣೆ ಎದುರಿಸಲು ನಾನು ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಸಿದ್ಧರಿದ್ದೇವೆ ಎಂದು ಸಂಸದ ಡಿಕೆ ಸುರೇಶ್ ಗುಡುಗಿದ್ದಾರೆ. ವಿಚಾರಣೆಗೆ ಹಾಜರಾಗಬೇಕೆಂದು ಡಿಕೆ ಸುರೇಶ್ ಅವರಿಗೆ ಇಡಿಯಿಂದ ನೋಟೀಸ್ ಬಂದಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ಧಾರೆ. ತಮಗೆ ಇಡಿಯಿಂದ ಯಾವುದೇ ಸಮನ್ಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಡಿಕೆ ಸುರೇಶ್, ಒಂದು ವೇಳೆ ಸಮನ್ಸ್ ಬಂದಲ್ಲಿ ಒಂಚೂರೂ ತಡ ಮಾಡದೇ ವಿಚಾರಣೆಗೆ ಹಾಜರಾಗುತ್ತೇನೆ. ಎಲ್ಲಾ ರೀತಿಯ ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ ಎಂದು ಗುಡುಗಿದ್ದಾರೆ.
ಈಗಷ್ಟೇ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಬಂದಿದ್ಧೇನೆ. ಅಣ್ಣ ಆರೋಗ್ಯವಾಗಿದ್ದಾರೆ. ಎಲ್ಲಾ ರೀತಿಯ ತನಿಖೆ ಎದುರಿಸಲು ಸಿದ್ಧರಿದ್ದಾರೆ. ನನಗೂ ಅದೇ ಮಾತನ್ನು ಹೇಳಿದ್ದಾರೆ. ನಾವು ಎಂತಹ ತನಿಖೆ ಎದುರಿಸಲೂ ಸಜ್ಜಾಗಿದ್ದೇವೆ ಎಂದು ಕಾಂಗ್ರೆಸ್ ಸಂಸದರಾದ ಅವರು ತಿಳಿಸಿದ್ದಾರೆ. ಇದೇ ಈ ವೇಳೆ ಮಾಧ್ಯಮಗಳ ವಿರುದ್ಧ ಕೋಪ ವ್ಯಕ್ತಪಡಿಸಿದ ಡಿಕೆ ಸುರೇಶ್, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ಧಾರೆ. “ಮಾಧ್ಯಮಗಳು ನಮ್ಮ ವಿರುದ್ಧ ಮನಬಂದಂತೆ ವರದಿ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ವಿರುದ್ಧವೂ ಕಾನೂನು ಹೋರಾಟ ಮಾಡುತ್ತೇವೆ. ಈ ಬಗ್ಗೆ ವಕೀಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ, ಹೆಚ್ಚು ಕಡಿಮೆಯಾದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಡಿಕೆ ಸುರೇಶ್ ಮಾಧ್ಯಮಗಳ ವಿರುದ್ಧ ಸಿಡಿದೆದ್ದಿದ್ದಾರೆ.
ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 14ರವರೆಗೆ ಮುಂದೂಲಾಗಿರುವುದರ ಬಗ್ಗೆ ಡಿಕೆ ಸುರೇಶ್ ಹೆಚ್ಚೇನೂ ಪ್ರತಿಕ್ರಿಯೆ ನೀಡಲಿಲ್ಲ. ಕೋರ್ಟ್ಗೆ ರಜೆ ಇರುವ ಕಾರಣಕ್ಕೆ ಮುಂದೂಡಿಕೆಯಾಗಿದೆ. ನಾಳೆ ಇಡಿ ಕೋರ್ಟ್ನಲ್ಲಿ ಮಾಮೂಲಿಯಂತೆ ವಿಚಾರಣೆ ನಡೆಯಲಿದೆ ಎಂದವರು ಸ್ಪಷ್ಟನೆ ಕೊಟ್ಟಿದ್ದಾರೆ. ಡಿಕೆ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯದಿಂದ ಇಡಿ ನೋಟೀಸ್ ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್, ಈ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.