ಇಲ್ಲಿಯವರೆಗೆ ಕೊರೋನಾ ಸೋಂಕಿನ ಸಂಖ್ಯೆ ಎಷ್ಟಾಗಿದೆ ಗೊತ್ತಾ..?

Soma shekhar
ಭಾರತದಲ್ಲಿ ಕೊರೊನಾ ಪೆಡಂಭೂತದ ಎರಡನೇ ದಾಳಿಯ ಆತಂಕದ ನಡುವೆಯೇ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ನಿರಂತರ ಹೆಚ್ಚಳ ಕಂಡು ಬರುತ್ತಿರುವುದು ಗಂಡಾಂತರಕಾರಿ ಸಂಗತಿಯಾಗಿದೆ. ಜಗತ್ತಿನ ಕೋವಿಡ್ ಹಾವಳಿ ಪೀಡಿತ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಹೆಮ್ಮಾರಿಯ ಆರ್ಭಟ ಏರುಗತಿ ಯಲ್ಲಿಯೇ ಇದೆ. ಒಂದೇ ದಿನ 94,372 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 48 ಲಕ್ಷ ಸನಿಹದಲ್ಲಿದೆ.



ದೇಶದಲ್ಲಿ ಶುಕ್ರವಾರ 97,579, ಗುರುವಾರ 96,559 ಮತ್ತು ಬುಧವಾರ 95,745 ಹೊಸ ಕೇಸ್‍ಗಳು ದಾಖಲಾಗಿತ್ತು. ಇದರೊಂದಿಗೆ ದೇಶದಲ್ಲಿ ಸತತ ನಾಲ್ಕನೇ ದಿನ 94,000+ ಸೋಂಕು ಪ್ರಕರಣಗಳು ವರದಿಯಾಗಿದೆ. 24 ತಾಸುಗಳ ಅವಯಲ್ಲಿ 1,114 ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ.



ಮೊನ್ನೆ 1,201 ಜನರು ಸಾವಿಗೀಡಾಗಿದ್ದರು. ಇದು ಕೂಡ ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಸಾವಿನ ಪ್ರಕರಣವಾಗಿದೆ. ಸತತ ಏಳನೇ ದಿನ 1,110ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 78,500 ದಾಟಿದೆ. ಈ ತಿಂಗಳ ಆರಂಭದಿಂದಲೂ ಅಬ್ಬರಿಸಿ ಬೊಬ್ಬರಿಯುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ನಿಂದ ದೇಶದಲ್ಲಿ ಗಂಡಾಂತರಕಾರಿ ಪರಿಸ್ಥಿತಿ ತಲೆದೋರಿದೆ. ಭಾರತದಲ್ಲಿ 13 ದಿನಗಳಿಂದಲೂ ಸರಾಸರಿ 90,000 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ನಿನ್ನೆ 94,372 ಸೋಂಕು ಪ್ರಕರಣಗಳೊಂದಿಗೆ. ಒಟ್ಟು ರೋಗಿಗಳ ಸಂಖ್ಯೆ 47,54,356ಕ್ಕೇರಿದ್ದು, ಇಂದು ರಾತ್ರಿ ವೇಳೆಗೆ ಹೊತ್ತಿಗೆ 48 ಲಕ್ಷ ಮೀರುವ ಸಾಧ್ಯತೆ ಇದೆ.



ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಈ ತಿಂಗಳಲ್ಲಿ ಸತತ 13ನೇ ದಿನ 1,000ಕ್ಕೂ ಅಕ ಸಾವು ಪ್ರಕರಣಗಳು ವರದಿಯಾಗಿರುವುದು ದೇಶದಲ್ಲಿನ ಆತಂಕಕಾರಿ ಸ್ಥಿತಿಗೆ ಸಾಕ್ಷಿಯಾಗಿದೆ. ದೇಶದಲ್ಲಿ ಈ ತಿಂಗಳ ಕೇವಲ 12 ದಿನಗಳಲ್ಲಿ 10 ಲಕ್ಷ ಸೋಂಕು ಮತ್ತು 13,000 ಸಾವು ಪ್ರಕರಣಗಳು ವರದಿಯಾಗಿರುವುದು ಆತಂಕದ ಸಂಗತಿಯಾಗಿದೆ.



ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.77.88ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ ಸುಮಾರು 5.62 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ 9.73 ಲಕ್ಷ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ ಸುಮಾರು 37.02 ಲಕ್ಷ ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ.



ದೇಶದಲ್ಲಿ ಈಗ 9,73,175 ಆಕ್ಟಿವ್ ಕೇಸ್‍ಗಳಿದ್ದು, 37,02,595ಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಆಕ್ಟಿವ್ ಕೇಸ್‍ಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ಸುಮಾರು ನಾಲ್ಕು ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ. ಚೇತರಿಕೆ ಪ್ರಮಾಣ ಶೇ.77,88ರಷ್ಟ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.66ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.


Find Out More:

Related Articles: