ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ..?
ದೇಶದ ಮುಂಚೂಣಿ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಈ ವಿಷಯವನ್ನು ಬಹಿರಂಗಪಡಿಸಿದೆ. ಮಾರಾಟ ದಾಖಲೆಗಳ ಪ್ರಕಾರ, ಭಾರತದ ರಸ್ತೆಗಳಲ್ಲಿ ಮಾರುತಿ ಸುಜುಕಿಯ ಅಲ್ಟೋ ಮಾದರಿ ಕಾರುಗಳದ್ದೇ ಕಾರುಬಾರು. ಎಲ್ಲಿ ಕಣ್ಣು ಹಾಯಿಸಿದರೂ ಆಲ್ಟೋ ಮಾದರಿ ಕಾರು ಕಣ್ಣಿಗೆ ಬೀಳದೇ ಇರದು. ಅಷ್ಟರ ಮಟ್ಟಿಗೆ ಜನಪ್ರಿಯತೆ ಮತ್ತು ಅನುಕೂಲಕರವಾಗಿರುವ ಕಾರು ಅದು. ಕೆಳ ಮಧ್ಯಮದಿಂದ ಹಿಡಿದು ಶ್ರೀಮಂತರ ತನಕ ಇಷ್ಟ ಪಡುವ ಕಾರು ಎಂದು ಕಂಪನಿ ಹೇಳಿಕೊಂಡಿದ್ದು, ಈ ಸೆಗ್ಮೆಂಟ್ ನ ಕಾರುಗಳ ಪೈಕಿ ಇದು ಸತತ 16 ವರ್ಷಗಳಿಂದ ಜೀವಂತಿಕೆ ಉಳಿಸಿಕೊಂಡಿದೆ ಎಂದಿದೆ.
ಹದಿನಾರು ವರ್ಷಗಳ ಪೈಕಿ ಎಲ್ಲ ವರ್ಷವೂ ಆಲ್ಟೋ ನಂ.1 ಸ್ಥಾನದಲ್ಲಿದೆ. ಅಲ್ಲದೆ, ಇದುವರೆಗೆ 40 ಲಕ್ಷ ಕಾರು ಮಾರಾಟವಾಗಿದೆ. ಭಾರತದಲ್ಲಿ ಇದೊಂದು ದಾಖಲೆ. ಇಷ್ಟು ಪ್ರಮಾಣದಲ್ಲಿ ಇದುವರೆಗೆ ಯಾವ ಮಾದರಿಯ ಕಾರು ಕೂಡ ಮಾರಾಟವಾಗಿಲ್ಲ ಎಂದು ಮಾರುತಿ ಸುಜುಕಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.
ಭಾರತದಲ್ಲಿ ಆಲ್ಟೋ ಮೊದಲ ಬಾರಿಗೆ 2004ರಲ್ಲಿ ರಸ್ತೆ ಇಳಿದ್ದಿದ್ದು, 2008ರಲ್ಲಿ 10 ಲಕ್ಷ ಕಾರುಗಳು ಮಾರಾಟವಾಗಿದ್ದವು. ಅದಾಗಿ 2012ರ ವೇಳೆಗೆ 20 ಲಕ್ಷ, 2016ರ ವೇಳೆಗೆ 30 ಲಕ್ಷ ಕಾರುಗಳು ಮಾರಾಟವಾಗಿದ್ದವು. 2019ರ ನವೆಂಬರ್ ವೇಳೆಗೆ 38 ಲಕ್ಷ ಕಾರುಗಳು ಮಾರಾಟವಾಗಿದ್ದವು. ಇದೊಂದು ದಾಖಲೆಯಾಗಿತ್ತು. ಅದುವರೆಗೆ ಭಾರತದ ಯಾವುದೇ ಕಾರುಗಳು ಇಷ್ಟು ಮಾರಾಟವಾಗಿರಲಿಲ್ಲ ಎಂದು ಶ್ರೀವಾಸ್ತವ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಅಲ್ಟೋ ಕಾರಿಗೆ ಸಮರ್ಥ ಎದುರಾಳಿ ಕಾರುಗಳು ಸೃಷ್ಟಿಯಾಗಿದ್ದು ಅವುಗಳ ಪೈಕಿ ರೆನಾಲ್ಟ್ ಕ್ವಿಡ್ ಒಂದು. ಸಣ್ಣ ಕಾರು ಖರೀದಿದಾರರು ಆ ಕಾರನ್ನೂ ಇಷ್ಟಪಡುತ್ತಿದ್ದಾರೆ. ಆದರೆ, ಇದು ಆಲ್ಟೋವನ್ನು ಹಿಂದಿಕ್ಕುವಲ್ಲಿ ಸಫಲವಾಗಿಲ್ಲ. ಸಕಾಲಿಕವಾಗಿ ಅಪ್ಡೇಟ್ ಆಗುತ್ತ ಬಂದ ಕಾರಣ ಆಲ್ಟೋ ಇನ್ನೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು