
ಭಾರತ ಮತ್ತು ಚೀನ ಸೇನೆಗಳ ನಡುವಿನ ಮಾತುಕತೆಯ ಫಲಿತಾಂಶ ಏನು ಗೊತ್ತಾ..?
ಇದರೊಂದಿಗೆ ಪ್ರಸ್ತುತ ಪರಿಸ್ಥಿತಿಯನ್ನು ಬದಲಾಯಿಸುವ ಬಗ್ಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳದಿರಲು ಎರಡೂ ಕಡೆಯವರು ಒಪ್ಪಿದ್ದಾರೆ. ಮುಂದೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಸೋಮವಾರ ನಡೆದ ಸಭೆಯಲ್ಲಿ ಮೊದಲ ಬಾರಿಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೂ ಭಾಗವಹಿಸಿದ್ದರು. 13 ಗಂಟೆಗಳ ಸುದೀರ್ಘ ಮಾತುಕತೆಯ ಸಮಯದಲ್ಲಿ 2020ರ ಮೇ ಮೊದಲು ಇದ್ದ ಪೂರ್ವ ಲಡಾಖ್‌ನ ಸ್ಥಾನಗಳಿಗೆ ಹಿಂತಿರುಗಲು ಭಾರತವನ್ನು ಚೀನ ಕೇಳಿದೆ. ಇದಕ್ಕಾಗಿ ಗಡುವನ್ನು ನಿಗದಿಪಡಿಸಿ, ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಪರಿಹರಿಸಲು ಮಾತುಕತೆ ಮುಂದುವರಿಸಲು ಸಭೆ ತೀರ್ಮಾನಿಸಿತ್ತು.
ಸಭೆಯಲ್ಲಿ 14 ಕಾರ್ಪ್ಸ್ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಭಾಗವಹಿಸಿದ್ದರು. ಮೆನನ್ ಮುಂದಿನ ತಿಂಗಳು ಲೆಫ್ಟಿನೆಂಟ್ ಜನರಲ್ ಆಗಿ ಹರಿಂದರ್ ಅವರ ಸ್ಥಾನಕ್ಕೆ ನೇಮಕವಾಗಲಿದ್ದಾರೆ. ದಕ್ಷಿಣ ಜಿನ್ ಜಿಯಾಂಗ್ ಮಿಲಿಟರಿ ಪ್ರದೇಶದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಅವರು ಸಭೆಯಲ್ಲಿದ್ದರು. ವಿಶೇಷವೆಂದರೆ ಈ ಸಭೆಯಲ್ಲಿ ಮೊದಲ ಬಾರಿಗೆ ವಿದೇಶಾಂಗ ಸಚಿವಾಲಯದ ಪೂರ್ವ ಏಷ್ಯಾ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಕೂಡ ಭಾಗವಹಿಸಿದ್ದರು. ಸಭೆ ಸೋಮವಾರ ಬೆಳಗ್ಗೆ 10ರಿಂದ ರಾತ್ರಿ 11ರ ವರೆಗೆ ನಡೆದಿತ್ತು.
ವಿವಾದಿತ ಎಲ್ಲ ಅಂಶಗಳಿಂದ ಚೀನ ಕೂಡಲೇ ಹಿಂದೆ ಸರಿಯಬೇಕು ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಇದಲ್ಲದೆ ಚೀನ ಹಿಮ್ಮೆಟ್ಟಲು ಪ್ರಾರಂಭಿಸಬೇಕು, ಏಕೆಂದರೆ ಈ ವಿವಾದಕ್ಕೆ ಚೀನದ ಸೈನ್ಯ ನೇರ ಕಾರಣ. ಚೀನ ಸಂಪೂರ್ಣವಾಗಿ ಹಿಂತಿರುಗಿ ಯಥಾಸ್ಥಿತಿಯನ್ನು ಪುನಃಸ್ಥಾಪಿಸದಿದ್ದರೆ, ಚಳಿಗಾಲದಲ್ಲೂ ಸಹ ಭಾರತೀಯ ಸೇನೆಯು ಗಡಿಯಲ್ಲಿ ಉಳಿಯುತ್ತದೆ ಎಂದು ಸಭೆಗೆ ಭಾರತ ಹೇಳಿದೆ.
ಆಗಸ್ಟ್ 29ರ ನಂತರ ಆಕ್ರಮಿಸಿಕೊಂಡಿರುವ ಪಂಗೋಗ್ ತ್ಸೋದ ದಕ್ಷಿಣ ಪ್ರದೇಶದ ಸ್ಥಾನಗಳನ್ನು ಭಾರತ ಖಾಲಿ ಮಾಡಬೇಕು ಎಂದು ಚೀನ ಹೇಳಿದೆ. ಮತ್ತೂಂದೆಡೆ, 2020ರ ಎಪ್ರಿಲ.-ಮೇ ಮೊದಲು ಇದ್ದ ಪರಿಸ್ಥಿತಿಯನ್ನು ಪುನಃಸ್ಥಾಪಿಸಲು ಭಾರತವೂ ಒತ್ತಾಯಿಸಿತು ಎಂದು ತಿಳಿದು ಬಂದಿದೆ. ಕಾರ್ಪ್ಸ್ ಕಮಾಂಡರ್ಸ್ ಸಭೆಯ ಮೊದಲು ಸಭೆಯ ಕಾರ್ಯಸೂಚಿ ಮತ್ತು ಸಮಸ್ಯೆಗಳನ್ನು ಭಾರತ ಮೊದಲು ನಿರ್ಧರಿಸಿತು.
ಕಳೆದ ವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇವುಗಳ ಬಗ್ಗೆ ಚರ್ಚಿಸಲಾಯಿತು. ಇದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕಂದ್ ನರ್ವಾನೆ ಭಾಗವಹಿಸಿದ್ದರು.