ಟ್ರಂಪ್ ವಿರುದ್ಧ ವಿದ್ಯಾರ್ಥಿಗಳಿಂದ ಕಾನೂನು ಹೋರಾಟ: ಅಷ್ಟಕ್ಕೂ ಈ ಹೋರಾಟ ಏಕೆ ಗೊತ್ತಾ..?
ಕೊರೊನಾ ವೈರಸ್ ನಡುವೆ ವಿದೇಶಿ ವಿದ್ಯಾರ್ಥಿಗಳಿಗೆ ಹೊಸ ವೀಸಾ ನೀತಿ ಜಾರಿಗೆ ತರುವ ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರದ ವಿರುದ್ಧ 17 ರಾಜ್ಯಗಳು ಮತ್ತು ಕೊಲಂಬಿಯಾ ರಾಜ್ಯಾಡಳಿತ ಕಾನೂನು ಹೋರಾಟಕ್ಕೆ ಮುಂದಾಗಿದೆ. ಹೋಮ್‍ಲ್ಯಾಂಡ್ ಸೆಕ್ಯುರಿಟಿ (ಡಿಹೆಚ್‍ಎಸ್) ಮತ್ತು ಯುಎಸ್ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ ಫೋರ್ಸ್‍ಮೆಂಟ್ (ಐಸಿಇ) ವಿರುದ್ಧ ಮ್ಯಾಸಚೂಸೆಟ್ಸ್‍ನ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್‍ನಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಅರ್ಜಿಯಲ್ಲಿ ವಿದ್ಯಾರ್ಥಿಗಳು ಇಡೀ ನಿಯಮ ಜಾರಿಗೆ ಬರದಂತೆ ತಡೆಯಾಜ್ಞೆ ಕೋರಿದ್ದಾರೆ. ಕಳೆದ ಜುಲೈ 6ರಂದು ಟ್ರಂಪ್ ಹೊಸ ಆದೇಶದನ್ವಯ ವಲಸೆರಹಿತ ಎಫ್-1 ಮತ್ತು ಎಂ-1 ವಿದ್ಯಾರ್ಥಿಗಳು ಸಂಪೂರ್ಣವಾಗಿ ಆನ್‍ಲೈನ್‍ಲ್ಲಿ ಕಲಿಯುತ್ತಿದ್ದರೆ ಅಥವಾ ಆನ್‍ಲೈನ್ ಕೋರ್ಸ್‍ಗಳನ್ನು ಮಾತ್ರ ತೆಗೆದುಕೊಂಡಿದ್ದರೆ ಅಮೆರಿಕ ತ್ಯಜಿಸುವಂತೆ ತಿಳಿಸಿದ್ದರು.
ಇದರ ನಡುವೆ ಹಲವಾರು ಶಾಲಾ-ಕಾಲೇಜುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿದ್ದು, ಪ್ರಸ್ತುತ ಕಲಿಕೆಗೆ ಯಾವುದೇ ಅಡ್ಡಿಯಾಗಬಾರದೆಂಬ ಹಿತದೃಷ್ಟಿಯಿಂದ ಆನ್‍ಲೈನ್‍ನಲ್ಲಿ ಪಾಠ ಮಾಡಲಾಗುತ್ತಿದೆ.ಆದರೆ, ಟ್ರಂಪ್ ಹೊಸ ನೀತಿಯ ಪ್ರಕಾರ ಹಲವಾರು ಶಿಕ್ಷಣ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿ ವಿದ್ಯಾರ್ಥಿಗಳು ಸಹ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದು ಕ್ರೂರ ಕಾನೂನು ಮತ್ತು ಅರಿವಿಲ್ಲದ ನೀತಿ ಎಂದು ಇಡೀ ರಾಷ್ಟ್ರದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚಿನ ವರದಿ ಪ್ರಕಾರ, (ಜನವರಿ) ಅಮೆರಿಕದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ 1,94,556 ಭಾರತೀಯ ವಿದ್ಯಾರ್ಥಿಗಳು ದಾಖಲಾಗಿದ್ದರು. ಅವರಲ್ಲಿ 1,26,132 ಪುರುಷರು ಮತ್ತು 68,405 ಮಹಿಳೆಯರಿದ್ದರು.ಜಂಟಿ ಮೊಕದ್ದಮೆ ಹೂಡಿದ ರಾಜ್ಯಗಳಲ್ಲಿ ಕೊಲೊರಾಡೋ, ಕನೆಕ್ಟಿಕಟ್, ಡೆಲವೇರ್, ಇಲಿನಾಯ್ಸ್, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ಮಿಚಿಗನ್, ಮಿನ್ನೇಸೋಟ, ನೆವಾಡಾ, ನ್ಯೂಜೆರ್ಸಿ, ನ್ಯೂ ಮೆಕ್ಸಿಕೊ, ಒರೆಗಾನ್, ಪೆನ್ಸಿಲ್ವೇನಿಯಾ, ರೋಡ್ ಐಲೆಂಡ್, ವರ್ಮೊಂಟ್, ವರ್ಜೀನಿಯಾ ಮತ್ತು ವಿಸ್ಕಾನ್ಸಿನ್ ಕೂಡ ಸಾಥ್ ನೀಡಿವೆ.
ಅರ್ಜಿ ಸಲ್ಲಿಸಿರುವ 18 ಅಟಾರ್ನಿ ಜನರಲ್ ಒಕ್ಕೂಟದ ನೇತೃತ್ವ ವಹಿಸಿದ್ದ ಮ್ಯಾಸಚೂಸೆಟ್ಸ್ ಅಟಾರ್ನಿ ಜನರಲ್ ಮËರಾ ಹೀಲೆ ಮಾತನಾಡಿ, ಟ್ರಂಪ್ ಆಡಳಿತವು ಈ ಪ್ರಜ್ಞಾಶೂನ್ಯ ನಿಯಮದ ಆಧಾರವನ್ನು ನೀಡುತ್ತಿಲ್ಲ. ಇದರಿಂದ ಶೈಕ್ಷಣಿಕ ಸಮುದಾಯಗಳಿಗೆ ಆರ್ಥಿಕ ಹೊಡೆತ ಬೀಳಲಿದೆ ಎಂದು ಹೇಳಿದ್ದಾರೆ.
ಇದರ ಜತೆಗೆ ವಿದ್ಯಾರ್ಥಿಗಳಿಗೆ ಅವರ ಕ್ಯಾಂಪಸ್‍ನಲ್ಲಿ ಆರೋಗ್ಯ ಮತ್ತು ಸುರಕ್ಷತೆ ಒದಗಿಸುವುದು ಕೂಡ ಸವಾಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಕೆಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು ಕೂಡ ಕೋರ್ಟ್ ಮೊರೆ ಹೋಗಿವೆ. ಈ ಕಾನೂನು ಹೋರಾಟ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.