ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ನೀಡುವ ಈ ಯೋಜನೆಯ ಅನುಷ್ಟಾನ ವಿಳಂಭವಾಗುತ್ತದೆ..!!
ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳೂ ಕೂಡ ಬಂದ್ ಆಗಿದ್ದವು ಇದರಿಂದ ಅನೇಕ ಉದ್ದಿಮೆಗಳು ಸಾಕಷ್ಟು ನಷ್ಟವನ್ನು ಅನುಭವಿಸಿದ್ದವು, ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದ ಎಲ್ಲಾ ವಲಯಗಳಿಗೂ ಅನುಕೂಲವಾಗುವಂತೆ 20 ಲಕ್ಷ ಕೋಟಿಯನ್ನು ಬಿಡುಗಡೆಯನ್ನು ಮಾಡಲಾಗಿತ್ತು ಆದರೆ ಈಗ ಮಧ್ಯಮ ಹಾಗೂ ಸಣ್ಣ ಕೈಗಾಗಿಕೆಗಳಿಗೆ ನೀಡಲಾಗುವ 2ಲಕ್ಷಕೋಟಿ ರೂ ಸಾಲ ಯೋಜನೆ ಅನುಷ್ಟಾನ ವಿಳಂಭವಾಗುತ್ತದೆ ಎಂದು ತಿಳಿಸಲಾಗಿದೆ. ಅಷ್ಟಕ್ಕೂ ವಿಳಂಭಕ್ಕೆ ಕಾರಣ ಏನು ಗೊತ್ತಾ..?
ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ (ಎಂಎಸ್ಎಂಇ) ನೆರವು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ 3 ಲಕ್ಷ ಕೋಟಿ ಸಾಲ ಯೋಜನೆಯ ಅನುಷ್ಠಾನ ವಿಳಂಭವಾಗುತ್ತಿದೆ ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆ, ಕೈಗಾರಿಕಾ ಸಂಸ್ಥೆ ಲಘು ಉದ್ಯೋಗ್ ಭಾರತಿ (ಎಲ್ಯುಬಿ) ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಇಂದು ತಿಳಿಸಿದೆ.
ಕೊರೋನಾ ಲಾಕ್‌ಡೌನ್‌ನಿಂದಾಗಿ ಭಾರತದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಸಾಕಷ್ಟು ನಷ್ಟ ಅನುಭವಿಸಿದ್ದವು. ಹೀಗಾಗಿ ಈ ಉದ್ಯಮಗಳ ಅಭಿವೃದ್ಧಿ ಸಲುವಾಗಿ ಕೇಂದ್ರ ಸರ್ಕಾರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ (ಎಂಎಸ್ಎಂಇ) ನೆರವು ನೀಡುವ ಸಲುವಾಗಿ 3 ಲಕ್ಷ ಕೋಟಿ ಬೃಹತ್ ಪ್ಯಾಕೇಜ್ ಘೋಷಣೆ ಮಾಡಿತ್ತು. ಈ ಹಣದಲ್ಲಿ ಉದ್ಯಮಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹಣವನ್ನು ಸಾಲವಾಗಿ ನೀಡುವ ಯೋಜನೆ ಇದಾಗಿತ್ತು. ಆದರೆ, ಈ ಹಣ ಈವರೆಗೆ ಉದ್ಯಮಿಗಳ ಕೈಸೇರಿಲ್ಲ ಎನ್ನಲಾಗುತ್ತಿದೆ.
ಎಂಎಸ್‌ಎಂಇ ವಲಯಕ್ಕೆ 3 ಲಕ್ಷ ಕೋಟಿ ರೂ.ಗಳ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅನುಷ್ಠಾನಗೊಳಿಸುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಿರ್ಮಲಾ ಸೀತಾರಾಮನ್ ಅವರು ಲಘು ಉದ್ಯೋಗ್ ಭಾರತಿ ಪ್ರಧಾನ ಕಾರ್ಯದರ್ಶಿ ಗೋವಿಂದ್ ಲೆಲೆ ಅವರನ್ನು ಇಂದು ಕರೆಸಿದ್ದರು. ಈ ಭೇಟಿಯ ಬಳಿಕ ಮಾತನಾಡಿರುವ ಗೋವಿಂದ್ ಲೆಲೆ, 'ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರ ಘೋಷಿಸಿರುವ ಯೋಜನೆಯ ಪ್ರಕಾರ ಸಾಲವನ್ನು ನೀಡಲು ಪ್ರಾರಂಭಿಸಿವೆ. ಆದರೆ, ಶಾಖೆಯ ಮಟ್ಟದಲ್ಲಿ ಯಾವುದೇ ಮೊತ್ತವನ್ನು ಮಂಜೂರು ಮಾಡುವ ಮೊದಲು ಕಳೆದ ಮೂರು ವರ್ಷದ ಉದ್ಯಮದ ಆದಾಯ ಮತ್ತು ಲಾಭದಾಯಕತೆಯ ಕುರಿತ ಪ್ರಕ್ಷೇಪಗಳನ್ನು ಕೋರಲಾಗುತ್ತಿದೆ.
ಇನ್ನೂ ಖಾಸಗಿ ಬ್ಯಾಂಕುಗಳು ಈ ಯೋಜನೆಯನ್ನು ಈವರೆಗೆ ಅನುಷ್ಠಾನಗೊಳಿಸಲು ಪ್ರಯತ್ನಿಸಿಲ್ಲ. ಆದ್ದರಿಂದ, ಯೋಜನೆಯನ್ನು ಕಾರ್ಯಗತಗೊಳಿಸಲು ಅವರಿಗೆ ತಕ್ಷಣವೇ ಸೂಚನೆ ನೀಡಬೇಕಾಗಿದೆ" ಎಂದು ಹಣಕಾಸು ಸಚಿವರಿಗೆ ತಾವು ತಿಳಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೆ, 'ಆರ್‌ಎಸ್‌ಎಸ್ ಅಂಗಸಂಸ್ಥೆ ಈ ಯೋಜನೆಯ ಅನುಷ್ಠಾನದ ಕುರಿತು ಈಗಾಗಲೇ ಸಮೀಕ್ಷೆ ಆರಂಭಿಸಿದ್ದು, ಇದನ್ನು ಪೂರ್ಣಗೊಳಿಸಿ ಸಂಶೋಧನೆಯ ಫಲಿತಾಂಶವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಹಂಚಿಕೊಳ್ಳಲಾಗುವುದು" ಎಂದು ಗೋವಿಂದ್ ಲೆಲೆ ತಿಳಿಸಿದ್ದಾರೆ.