ಭಾರತದ ಕೊರೋನಾ ಔಷಧಿಯ ಪ್ರಯೋಗಿಕ ಕಾರ್ಯ ಯಾವ ಹಂತದಲ್ಲಿದೆ..?

Soma shekhar
ಭಾರತದಲ್ಲಿ ಕೊರೋನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸುತ್ತಿದ್ದು, ಈಗಾಗಲೇ ಕ್ಲಿನಿಕಲ್ ಪ್ರಯೋಗವನ್ನು ಮಾಡಿ ವಿವಿಧ ರೀತಿಯ ಮಾನವ ಪ್ರಯೋಗಗಳನ್ನು ಮಾಡಲಾಗುತ್ತಿದೆ.  ನಮ್ಮಲ್ಲಿ ಈಗಾಗಲೇ ಪ್ರಯೋಗದ ವಿವಿಧ ಹಂತಗಳಲ್ಲಿರುವ ಲಸಿಕೆಗಳಲ್ಲಿ ಒಂದು ಲಸಿಕೆ ತನ್ನ ಮೂರನೇ ಹಂತದ ಪ್ರಯೋಗವನ್ನು ನಾಳೆ ನಡೆಸುವ ನಿರೀಕ್ಷೆ ಇದೆ ಎಂದು ನೀತಿ ಆಯೋಗದ ಸದಸ್ಯರಾಗಿರುವ ವಿ ಕೆ ಪೌಲ್ ಅವರು ಮಾಹಿತಿ ನೀಡಿದ್ದಾರೆ.



ಭಾರತದಲ್ಲೇ ತಯಾರಾಗುತ್ತಿರುವ ಸ್ವದೇಶಿ ಲಸಿಕೆಯೊಂದರ ಮೂರನೇ ಹಂತದ ಅಂದರೆ ಸುಮುದಾಯ ಮಟ್ಟದ ಪ್ರಯೋಗ ಪ್ರಾರಂಭಗೊಳ್ಳುತ್ತಿರುವುದು ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ದೇಶದ ಜನರಿಗೆ ಹಾಗೂ ಇಲ್ಲಿನ ಆರೋಗ್ಯ ವ್ಯವಸ್ಥೆಗೆ ಒಂದು ಹೊಸ ಭರವಸೆಯನ್ನೇ ನೀಡಿದಂತಾಗಿದೆ. ಈ ಕುರಿತಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮಾಹಿತಿ ನೀಡಿದ್ದರು ಮತ್ತು ದೇಶದಲ್ಲಿ ಮೂರು ವ್ಯಾಕ್ಸಿನ್ ಗಳು ತಮ್ಮ ಪ್ರಯೋಗದ ವಿವಿಧ ಹಂತಗಳಲ್ಲಿವೆ’ ಎಂದು ಅವರು ಹೇಳಿದ್ದರು.



ಇವುಗಳಲ್ಲಿ ಒಂದು ವ್ಯಾಕ್ಸಿನ್ ಬುಧವಾರದಂದರು ಮೂರನೇ ಹಂತದ ಪ್ರಯೋಗಕ್ಕೆ ತೆರೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ ಎರಡು ಲಸಿಕೆಗಳು ಕ್ರಮವಾಗಿ ಒಂದನೇ ಹಂತ ಮತ್ತು ಎರಡನೇ ಹಂತದ ಪ್ರಯೋಗಗಳಲ್ಲಿವೆ. ಕೊವ್ಯಾಕ್ಸಿನ್ ಮತ್ತು ಝೈಕೊವ್ -ಡಿ ಲಸಿಕೆಗಳು ಮಾನವ ಪ್ರಯೋಗ ಹಂತದಲ್ಲಿವೆ. ಇವುಗಳಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ, ಪುಣೆ ಇವುಗಳು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿವೆ.




ಕೊವ್ಯಾಕ್ಸಿನ್ ಲಸಿಕೆಯ ಒಂದನೇ ಹಂತದ ಮಾನವ ಪ್ರಯೋಗ ಯಶಸ್ವಿಯಾಗಿದ್ದು ಇದೀಗ ಎರಡನೇ ಹಂತದ ಪ್ರಯೋಗ ಪ್ರಾರಂಭವಾಗಿದೆ. ಈ ಲಸಿಕೆಯ ಪ್ರಯೋಗ ದೇಶದ 12 ನಗರಗಳಲ್ಲಿ ನಡೆಯುತ್ತಿದೆ. ಝೈಡಸ್ ಕ್ಯಾಡಿಲ್ಲಾ ಝೈಕೋವ್-ಡಿ ಎಂಬ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಪುಣೆ ಮೂಲದ ಸೀರಂ ಇನ್ ಸ್ಟಿಟ್ಯೂಟ್ ಆಕ್ಸ್ ಪರ್ಡ್ ಆಸ್ಟ್ರಾ ಝೆನೆಕಾ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗವನ್ನು ಭಾರತದಲ್ಲಿ ಪ್ರಾರಂಭಿಸುತ್ತಿದೆ.



ಸದ್ಯಕ್ಕೆ ಜಗತ್ತಿನಾದ್ಯಂತ ಒಟ್ಟು ಎಂಟು ಲಸಿಕೆಗಳು ಮೂರನೇ ಹಂತದ ಮಾನವ ಪ್ರಯೋಗಕ್ಕೆ ಸಜ್ಜಾಗಿವೆ. ಅವುಗಳೆಂದರೆ, ಆಕ್ಸ್ ಫರ್ಡ್- ಆಸ್ಟ್ರಾ ಝೆನೆಕಾ, ಮಾಡೆರ್ನಾ, ಪಿಫೈಝರ್-ಬಯೋಎನ್ ಟೆಕ್, ಬೀಜಿಂಗ್ ಇನ್ ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ – ಸಿನೋಫಾರ್ಮ್, ವುಹಾನ್ ಇನ್ ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ಪ್ರಾಡಕ್ಟ್ಸ್ -ಸಿಬೋಫಾರ್ಮ್, ಸಿನೋವಾಕ್, ಕ್ಯಾನ್ಸಿನೋ ಮತ್ತು ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಸ್ಪುಟ್ನಿಕ್-V.



ಇವುಗಳಲ್ಲಿ ಸ್ಪುಟ್ನಿಕ್-V ಲಸಿಕೆಗೆ ಷರತ್ತುಬದ್ಧ ನೋಂದಾವಣೆಯನ್ನು ನೀಡಲಾಗಿದೆ ಹಾಗೂ ಚೀನಾದ ಕ್ಯಾನ್ಸಿನೋ ಲಸಿಕೆಗೆ ಪೇಟೆಂಟ್ ಲಭಿಸಿದ್ದು ಮಿಲಿಟರಿ ಬಳಕೆಗೆ ಅನುಮತಿ ನೀಡಲಾಗಿದೆ.

Find Out More:

Related Articles: