ಕೊರೋನಾ ಕಡಿಮೆಯಾದರೆ ಔಷಧಿಯನ್ನು ಸಂಶೋಧಿಸಲು ತೊಡಕಾಗುತ್ತದಂತೆ! ಅಷ್ಟಕ್ಕೂ ಅದು ಹೇಗೆ..?
ಇಡೀ ವಿಶ್ವವನ್ನೇ ತೀವ್ರವಾಗಿ ಕಾಡುತ್ತಿರುವ ಕೊರೋನಾ ಸೋಂಕು ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡು ಅನೇಕ ಜನರನ್ನು ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಈ ಒಂದು ಕೊರೋನಾ ವೈರಸ್ ಅನ್ನು ಇಡೀ ವಿಶ್ವದಿಂದ ತೊಲಗಿಸುವ ಉದ್ದೇಶದಿಂದ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಕೊರೋನಾ ಸೋಂಕಿಗೆ ಔಷಧಿಯ್ನು ಸಂಶೋಧಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ. ಆದರೆ ಈ ಮದ್ಯೆ ಕೊರೋನಾ ಸೋಂಕು ಕಡಿಮೆಯಾದರೆ ಕೊರೋನಾಗೆ ಔಷಧಿಯನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ ಎಂದು ವಿಶ್ವ ವಿದ್ಯಾಲಯವೊಂದು ಆಶ್ಚರ್ಯಕರ ಸುದ್ದಿಯೊಂದನ್ನು ಹೊರಹಾಕಿದೆ ಅಷ್ಟಕ್ಕೂ ಆ ವಿಶ್ವ ವಿದ್ಯಾನಿಲಯ ಯಾವುದು ಗೊತ್ತಾ..?
ವಿಶ್ವವನ್ನೇ ಬಾಧಿಸುತ್ತಿರುವ ಕರೊನಾ ಸೋಂಕು ಕೆಲದಿನಗಳಿಂದ ಇಳಿಮುಖವಾಗುತ್ತಿದೆ. ಇದೇ ರೀತಿ ಅದು ಕಡಿಮೆಯಾಗುವುದು ಮುಂದುವರಿದರೆ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ತೊಡಕಾಗುತ್ತದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.
ನಿರ್ದಿಷ್ಟವಾದ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ, ಸಂಶೋಧನೆ ನಡೆಯುತ್ತಿರುವ ಹೆಚ್ಚಿನ ಸಂಖ್ಯೆಯ ಸೋಂಕಿತರು ಸಿಗದೆ, ಚುಚ್ಚುಮದ್ದಿನ ಪರೀಕ್ಷೆಗೆ ತೊಡಕು ಉಂಟಾಗಲಿದೆ ಎಂದು ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಯಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರಿಗೆ ಸಹಕರಿಸುತ್ತಿರುವ ಔಷಧ ಕಂಪನಿ ಅಸ್ಟ್ರಾಜೆಂಕಾದ ಸಿಇಒ ಪ್ಯಾಸ್ಕಲ್ ಸೋರಿಯಾಟ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಹೆಚ್ಚಿನ ಸಂಖ್ಯೆಯ ಆರೋಗ್ಯವಂತ ಜನರಲ್ಲಿ ಕರೊನಾ ಸೋಂಕು ಉಂಟು ಮಾಡಿ, ಪರೀಕ್ಷೆ ಮುಂದುವರಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಿದ್ದಾರೆ.
ನಾವು ಸಮಯದ ವಿರುದ್ಧ ಹೋರಾಡುತ್ತಿದ್ದೇವೆ. ಯುರೋಪ್ನಲ್ಲಿ ಈಗಾಗಲೆ ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಅಮೆರಿಕ ಮತ್ತು ಬ್ರಿಟನ್ನಲ್ಲಿ ಹೆಚ್ಚಾಗಿದೆ. ಆದರೆ ಅಲ್ಲಿ ಕೂಡ ಸದ್ಯದಲ್ಲೇ ಸೋಂಕಿತರ ಸಂಖ್ಯೆ ಕಡಿಮೆಯಾಗುವುದು ನಿಶ್ಚಿತ. ಹಾಗಾಗಿ, ಸಂಶೋಧನೆಗೆ ತೊಡಕಾಗುವ ಸಾಧ್ಯತೆ ಇರುವುದರಿಂದ, ಸಂಶೋಧನೆಗಳನ್ನು ತ್ವರಿತವಾಗಿ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವಿವರಿಸಿದ್ದಾರೆ.
ಕೋವಿಡ್-19 ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಯಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ಜತೆಗೆ ಸ್ಯಾನೋಫಿ, ಜಾನ್ಸನ್ ಆಯಂಡ್ ಜಾನ್ಸನ್, ಗ್ಲಾಕ್ಸೋಸ್ಮಿತ್ಕ್ಲೈನ್ ಮತ್ತು ಫೈಜರ್ ಜತೆ ಅಸ್ಟ್ರಾಜೆನೆಕಾ ಕೂಡ ಶ್ರಮಿಸುತ್ತಿದೆ.
ವಿಶ್ವದ ಹಲವು ರಾಷ್ಟ್ರಗಳು ಲಾಕ್ಡೌನ್ ಮೂಲಕ ಕರೊನಾ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಾರಾದರೂ, ಈ ಸೋಂಕುರಹಿತ ವಾತಾವರಣದಲ್ಲಿ ಎಂದಿನಂತೆ ಮುಕ್ತವಾಗಿ ಜನಜೀವನ ನಡೆಯುವಂತೆ ಮಾಡಲು ಬದ್ಧವಾಗಿವೆ. ಈ ಹಿನ್ನೆಲೆಯಲ್ಲಿ ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ಎಲ್ಲ ರಾಷ್ಟ್ರಗಳು ಒತ್ತು ನೀಡುತ್ತಿವೆ.