ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯವೇ ಹೊರತು, ಅದು ಯಾರೊಬ್ಬರ ಪ್ರತಿಷ್ಠೆಯಲ್ಲ : ಶಿಕ್ಷಣ ಸಚಿವೆ ಸುರೇಶ್ ಕುಮಾರ್
ಕೊರೋನಾ ವೈರಸ್ ಇಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿತ್ತು ಈ ಸಂದರ್ಭದಲ್ಲಿ ನಡೆಯ ಬೇಕಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿಕೆಯಾಗಿತ್ತು. ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆ ಮತ್ತಷ್ಟು ದಿನ ಮುಂದೂಡಿಕೆಯಾಗಿತ್ತು. ಇದರಿಂದಾಗಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಆತಂಕ ಹೆಚ್ಚಾಗಿದ್ದಂತೂ ಸುಳ್ಳಲ್ಲ. ಇದಕ್ಕೆ ಪರಿಹಾರವಾಗಿ ಶಿಕ್ಷಣ ಇಲಾಖೆ ಪರೀಕ್ಷೆಯ ವೇಳಾಪಟ್ಟಿಯನ್ನು ನಿಗದಿ ಪಡಿಸಿ ಪ್ರಕಟಿಸಿದೆ. ಈ ಕುರಿತು ಬಾನುಲಿ ಕೇಂದ್ರ ಆಕಾಶವಾಣಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್ ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ನಾಡಿನ ಮಕ್ಕಳ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯವೇ ಹೊರತು, ಅದು ಯಾರೊಬ್ಬರ ಪ್ರತಿಷ್ಠೆಯಲ್ಲ ನಮ್ಮ ರಾಜ್ಯದಲ್ಲಿ ಮಕ್ಕಳ ಮುಂದಿನ ವ್ಯಾಸಂಗಕ್ಕೆ ಎಸ್ಸೆಸ್ಸೆಲ್ಸಿ ತರಗತಿ ಪ್ರಮುಖ ತಿರುವು ಹಾಗು ಪ್ರಮುಖ ಮಾನದಂಡವಾಗಿರುವುದರಿಂದ 10ನೇ ತರಗತಿ ಪರೀಕ್ಷೆಯನ್ನು ನಡೆಸಬೇಕಾಗಿದೆ . ಎಂದು ಬಾನುಲಿ ಕೇಂದ್ರ ಆಕಾಶವಾಣಿ ಯಲ್ಲಿ, ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಪರೀಕ್ಷೆಗಳನ್ನು ನಡೆಯಬೇಕೆಂಬುದು ರಾಜ್ಯದ ಬಹುಪಾಲು ವಿದ್ಯಾರ್ಥಿಗಳ ಅಭಿಪ್ರಾಯವಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯ ಪ್ರಮುಖ ಪಾಲುದಾರರದ ನಮ್ಮ ವಿದ್ಯಾರ್ಥಿಗಳು, ಪೋಷಕರೊಂದಿಗೆ ಚರ್ಚೆ ನಡೆಸಿದ್ದೇನೆ. ಶಿಕ್ಷಣ ತಜ್ಞರು, ಸಾಹಿತಿಗಳು, ವಿಧಾನ ಪರಿಷತ್ತಿನ ಶಿಕ್ಷಕರ ಹಾಗು ಪದವೀಧರ ಕ್ಷೇತ್ರದ ಸದಸ್ಯರು ಸೇರಿದಂತೆ ಸಮಾಜದ ನಾನಾ ಸ್ತರದ ಪ್ರಮುಖರ ಅಭಿಪ್ರಾಯವೂ ಸಹ ಪರೀಕ್ಷೆಯನ್ನು ನಡೆಸಬೇಕೆಂಬುದಾಗಿದೆ ಎಂದು ಹೇಳಿದರು. ಜೂನ್ 25ರಿಂದ ನಮ್ಮ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಕೋವಿಡ್ ಹಿನ್ನೆಲೆಯ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ನಿರ್ವಹಣೆ ಮಾಡಲಾಗುವುದು ಎಂದರು.
ಮಕ್ಕಳ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಒಂದಂಶದ ಕಾರ್ಯಕ್ರಮ, ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗು ಪಿಯುಸಿ ಪರೀಕ್ಷೆಗಳ ನಿರ್ವಹಣೆಯಲ್ಲಿ ಬದಲಾವಣೆ,
ಸುಧಾರಣೆಗಳನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಆರೋಗ್ಯ ತಪಾಸಣೆ, ಮಾಸ್ಕ್ ಪೂರೈಕೆ, ಪರೀಕ್ಷಾ ಕೇಂದ್ರದ ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಕಂಟೈನ್ಮೆಂಟ್ ವಲಯಗಳಲ್ಲಿ ಪರೀಕ್ಷೆ ಇಲ್ಲ: ಯಾವುದೇ ಕಂಟೈನ್ಮೆಂಟ್ ವಲಯಗಳಲ್ಲಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಪರೀಕ್ಷೆ ನಡೆಯುವ ದಿನದ ಆಸುಪಾಸಿನಲ್ಲಿ ಯಾವುದೇ ವಲಯ ಕಂಟೈನ್ಮೆಂಟ್ ವಲಯವೆಂದು ಘೋಷಿತವಾದಾಗ ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿ ಎಂದು ಪರಿಗಣಿಸದೇ ಹೊಸ ಪರೀಕ್ಷಾರ್ಥಿ ಎಂದೇ ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದೆಂದು ಹೇಳಿದರು.
ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳ ಪ್ರಾರಂಭದ ದಿನಾಂಕವನ್ನು ಮುಂದಿನ ವಾರದಲ್ಲಿ ಅಂತಿಮಗೊಳಿಸಲಾಗುವುದು. ತರಗತಿಗಳನ್ನು ಈಗಲೇ ಪ್ರಾರಂಭಿಸಬಾರದೆಂದು ಪೋಷಕರ ಒತ್ತಡವಿದ್ದು, ಎಲ್ಲಾ ಆಯಾಮಗಳಲ್ಲಿ ಇದನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.