ಬೆಂಗಳೂರು: ಜಾತ್ಯಾತೀತ ಮನೋಭಾವನೆ ಉಳ್ಳವರು, ಸಮಾನ ಮನಸ್ಕರು ಬೆಂಬಲಿಸುತ್ತಾರೆ ಎಂದು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಚುನಾವಣೆ ಕಣದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರಾಗಿ ವಿಧಾನಪರಿಷತ್ ಉಪಚುನಾವಣೆಗೆ ಸ್ಪರ್ಧಿಸಿದ್ದ ಅನಿಲ್ ಕುಮಾರ್ ಹೇಳಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮೇಲ್ಮನೆ ಪ್ರವೇಶಿಸುವುದು ಖಚಿತವಾಗಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಇದೀಗ ಡಿಸಿಎಂ ಸ್ಥಾನದಲ್ಲಿರುವ ಲಕ್ಷಣ್ ದಿಲ್ ಖುಷ್ ಆಗಿದ್ದಾರೆ.
ವಿಧಾನ ಸೌಧದಲ್ಲಿ ಮಾತನಾಡಿದ ಅನಿಲ್ ಕುಮಾರ್ ಅವರು, “ನಾನು ಯಾರೊಂದಿಗೂ ಡೀಲ್ ಮಾಡಿಕೊಂಡಿಲ್ಲ, ಡೀಲ್ ಆಗೋ ಹಾಗಿದ್ರೆ ನಾನು ದಿಲ್ಲಿಗೆ ಹೋಗುತ್ತಿರಲಿಲ್ಲ. ನಾನು ಮಾರಿಕೊಳ್ಳುವ ವ್ಯಕ್ತಿ ಅಲ್ಲ. ಆದರೆ ಯಾರಿಗೂ ಮುಜುಗರ ಆಗಬಾರದೆಂದು ನಿವೃತ್ತಿ ಘೋಷಿಸಿದ್ದೇನೆ,” ಎಂದು ವಿವರಿಸಿದರು. “ಕಾಂಗ್ರೆಸ್ ಏಕ ವ್ಯಕ್ತಿಯ ಪಕ್ಷ ಅಲ್ಲ, ಕಲೆಕ್ಟೀವ್ ಅಭಿಪ್ರಾಯ ಮುಖ್ಯ ಆಗುತ್ತದೆ. ನಾನು ಯಾರನ್ನು ದೂಷಿಸಲ್ಲ, ಯಾವ ಆಮಿಷಕ್ಕೂ ಒಳಗಾಗಿಲ್ಲ. ನನ್ನ ಗುರುಗಳ ಆದೇಶದಿಂದ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ನನ್ನ ಸ್ಪರ್ಧೆಗೂ ಕಾಂಗ್ರೆಸ್ ನಾಯಕರಿಗೂ ಸಂಬಂಧ ಇಲ್ಲ,” ಎಂದು ಹೇಳಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಡಿಸಿಎಂ ಲಕ್ಷ್ಮಣ್ ಸವದಿಗೆ ಒಳ್ಳೆಯದಾಗಲಿ ಎಂದು ಹೇಳಿದ ಅನಿಲ್ ಕುಮಾರ್, ಯಾರಿಗೂ ಹೆದರುವ ವ್ಯಕ್ತಿ ನಾನಲ್ಲ ಎಂದರು. ಚುನಾವಣಾ ಕಣದಿಂದ ನಿವೃತ್ತಿ ಪಡೆಯುವುದಾಗಿ ಕಾರ್ಯದರ್ಶಿಗಳಿಗೆ ಕೈ ಬರಹದ ಪತ್ರ ನೀಡಿದ ನಂತರ ಹೇಳಿಕೆ ನೀಡಿ, “ನನ್ನ ಮಾತೃ ಪಕ್ಷಕ್ಕೂ ನಾಮಪತ್ರ ಸಲ್ಲಿಕೆಗೂ ಸಂಬಂಧ ಇಲ್ಲ. ಸಿದ್ದರಾಮಯ್ಯ ಸೇರಿದಂತೆ ಅನೇಕ ಜೆಡಿಎಸ್ ನಾಯಕರನ್ನೂ ಭೇಟಿ ಮಾಡಿ ಮತ ಕೇಳಿದ್ದೆ. ಯಾರಿಗಾದರೂ ನೋವು ಉಂಟಾಗಿದ್ದರೆ ಕ್ಷಮೆ ಯಾಚಿಸುತ್ತೇನೆ,” ಎಂದು ಹೇಳಿ ಭಾವುಕರಾದರು. ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಇದೇ ಫೆಬ್ರವರಿ 17 ರಂದು ಉಪಚುನಾವಣೆ ನಿಗದಿಯಾಗಿತ್ತು. ಆದರೀಗ ಮತದಾನಕ್ಕೂ ಮೊದಲೇ ಅನಿಲ್ ಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ಡಿಸಿಎಂ ಲಕ್ಷ್ಮಣ್ ಸವದಿ ಸ್ಥಾನ ಬಹುತೇಕ ಖಚಿತವಾಗಿದೆ.