ನವದೆಹಲಿ: ಜಾಗತಿಕವಾಗಿ ಹಬ್ಬುತ್ತಿರುವ ಕೊರೊನ ವೈರಸ್ ಬಗ್ಗೆ ಪ್ರಯಾಣಿಕರು, ಜನರು ತೀವ್ರ ಭಯಕ್ಕೆ ಒಳಗಾಗುತ್ತಿದ್ದಾರೆ. ದಿನ ಕಳೆದಂತೆ ಕೊರೊನ ವೈರಸ್ ನಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಇದರ ಬಗ್ಗೆ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಹೌದು, ಅದರಲ್ಲಿ ಏನ್ ಹೇಳಿದ್ದಾರೆ ಗೊತ್ತಾ!?
ಕೊರೊನ ವೈರಸ್ ಬಗ್ಗೆ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ನರೇಂದ್ರ ಮೋದಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದಲ್ಲಿಯೂ ವೈರಸ್ ಹಬ್ಬುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನರೇಂದ್ರ ಮೋದಿ, ಶನಿವಾರ ಸಂಜೆ ಉನ್ನತಾಧಿಕಾರಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. ಚೀನಾದಿಂದ ಹಾಗೂ ಇತರೆ ದೇಶಗಳಿಂದ ಬರುತ್ತಿರುವ ಪ್ರಯಾಣಿಕರನ್ನು ತೀವ್ರ ತಪಾಸಣೆಗೊಳಪಡಿಸಲಾಗುತ್ತಿದೆ ಎಂದ ಅಧಿಕಾರಿಗಳು ಈ ಸಂದರ್ಭದಲ್ಲಿ ಮೋದಿಗೆ ಮಾಹಿತ ನೀಡಿದರು. ಆರೋಗ್ಯ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಒಟ್ಟು 115 ವಿಮಾನಗಳಿಂದ ಆಗಮಿಸಿದ 20 ಸಾವಿರಕ್ಕೂ ಹೆಚ್ಚು ಪ್ರಯಾಣಿಕರನ್ನು ಕೊರೋನ ವೈರಸ್ ಸೋಂಕಿನ ಲಕ್ಷಣಗಳ ಪತ್ತೆಗಾಗಿ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈವರೆಗೆ ದೇಶದಲ್ಲಿ ಕೋರೋನ ವೈರಸ್ ಸೋಂಕು ಪತ್ತೆಯಾಗಿಲ್ಲ. ಆದರೂ ಮೂವರ ಬಗ್ಗೆ ನಿಗಾ ವಹಿಸಲಾಗಿದೆ. ಅವರಲ್ಲಿ ಇಬ್ಬರು ಚೀನಾ ಪ್ರವಾಸ ಕೈಗೊಂಡಿದ್ದರು. ಅವರನ್ನು ಮುಂಬೈನ ಕಸ್ತೂರಬಾ ಆಸ್ಪತ್ರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ದಾಖಲಿಸಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಗಿದೆ. ಈಗಿರುವ 7 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳೊಂದಿಗೆ ಇನ್ನೂ 12ನಿಲ್ದಾಣಗಳಲ್ಲಿ ತಪಾಸಣಾ ಘಟಕಗಳನ್ನು ಆರಂಭಿಸಲು ಆದೇಶಿಸಲಾಗಿದೆ.
ಇತ್ತೀಚೆಗೆ ಚೀನಾದ ವುಹಾನ್‌ನಲ್ಲಿ ಈ ಸೋಂಕು ಇರುವುದು ದೃಢಪಟ್ಟಿದೆ. ಈ ಮಧ್ಯೆ, ಕೊರೊನ ವೈರಸ್ ಸೋಂಕಿನಿಂದಾಗಿ 237ತೀವ್ರ ಪರಿಸ್ಥಿತಿ ಸೇರಿದಂತೆ 1,287ನ್ಯುಮೋನಿಯಾ ಪ್ರಕರಣಗಳು ದೃಢಪಟ್ಟಿವೆ ಎಂದು ಚೀನಾದ ಆರೋಗ್ಯ ಇಲಾಖೆ ತಿಳಿಸಿದೆ. ವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ 41ಮಂದಿ ಮೃತಪಟ್ಟಿದ್ದು, ಕೇಂದ್ರ ಹುಬೆ ಪ್ರಾಂತ್ಯವೊಂದರಲ್ಲೇ 39 ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಎಲ್ಲಿಯವರೆಗೂ ತಲುಪುತ್ತೋ ಎಂಬುದು ಚಿಂತಾಜನಕವಾಗಿದೆ.