ಹೊಸದಿಲ್ಲಿ: ಆಪ್, ಬಿಜೆಪಿ, ಕಾಂಗ್ರೆಸ್ ಮೂರ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿರುವ ದಿಲ್ಲಿ ವಿಧಾನಸಭೆ ಚುನಾವಣೆ ಶನಿವಾರ ನಡೆಯಲಿದೆ. ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಮೂರನೇ ಸಲ ಮುಖ್ಯಮಂತ್ರಿಯಾಗುವ ತವಕದಲ್ಲಿದ್ದರೆ, ಬಿಜೆಪಿ ಶತಾಯಗತಾಯ ದಿಲ್ಲಿ ಗದ್ದುಗೆ ಏರಲೇಬೇಕು ಎಂಬ ಪಣತೊಟ್ಟಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಕಾಂಗ್ರೆಸ್ 'ಮ್ಯಾಜಿಕ್' ನಿರೀಕ್ಷೆಯಲ್ಲಿದೆ. 70 ಸದಸ್ಯ ಬಲದ ವಿಧಾನಸಭೆಗೆ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಫೆ. 11ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನದ ಮುನ್ನಾ ದಿನವಾದ ಶುಕ್ರವಾರ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ನಗರದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ತಮ್ಮ ತಮ್ಮ ಪಕ್ಷದ ಗೆಲುವಿಗಾಗಿ ಪ್ರಾರ್ಥಿಸಿದರು. ''ಹರಿಯಾಣದಲ್ಲಿ ಕಾಂಗ್ರೆಸ್ ಎರಡು ಸ್ಥಾನ ಗೆಲ್ಲುವುದಾಗಿ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಪಕ್ಷ 31 ಸ್ಥಾನ ಗಳಿಸಿತು. ದಿಲ್ಲಿಯಲ್ಲಿಯೂ ಅಂತಹ ಜಾದೂ ನಡೆಯಬಹುದು,'' ಎನ್ನುವುದು ಕಾಂಗ್ರೆಸ್ ಮ್ಯಾಜಿಕ್ ನಂಬಿಕೆಯಾಗಿದೆ.
ಚುನಾವಣಾ ರಣತಂತ್ರ ರೂಪಿಸಿರುವ ಅಮಿತ್ ಶಾ ಮತ್ತು ಜೆಪಿ ನಡ್ಡಾ ಖುದ್ದು ಹತ್ತಾರು ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಎರಡು ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ವಿಜಯ್ ರೂಪಾಣಿ, ಎನ್ ಬಿರೇನ್ ಸಿಂಗ್ ಮತ್ತು ಮನೋಹರ ಲಾಲ್ ಖಟ್ಟರ್ ಪ್ರಚಾರ ನಡೆಸಿದ್ದಾರೆ. ಪಕ್ಷದ 375 ಸಂಸದರು ಎರಡು ದಿನ ನಗರದ ಕೊಳೆಗೇರಿಗಳು ಮತ್ತು ಬಡವರು ಹೆಚ್ಚಿರುವ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಕೇಂದ್ರ ಸರಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ.
ಕೇಂದ್ರ ಸರಕಾರದ ಅಭಿವೃದ್ಧಿಯ ಜತೆಗೆ ಸಿಎಎ ವಿರೋಧಿ ಹೋರಾಟ, ಅದರಲ್ಲಿಯೂ ಶಾಹೀನ್ ಬಾಗ್ ನಲ್ಲಿ ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ ಬಿಜೆಪಿ ನಾಯಕರ ಪ್ರಚಾರದ ಪ್ರಮುಖ ವಿಷಯವಾಗಿತ್ತು. ಶಾಹೀನ್ ಬಾಗ್ ಪ್ರತಿಭಟನೆ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗಳಿಂದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಸಂಸದ ಪರ್ವೇಶ್ ವರ್ಮಾ ಚುನಾವಣಾ ಆಯೋಗದಿಂದ ಪ್ರಚಾರ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ.