ಮುಂಬೈ: ಮಹಾರಾಷ್ಟ್ರದಲ್ಲಿ ಮಹಾ ರಾಜಕೀಯ ಹೈಡ್ರಾಮಗಳೆಲ್ಲಾ ನಡೆದ ಮೇಲೆ ಇದೀಗ ಕೊನೆಗೂ ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಮಹಾರಾಷ್ಟ್ರ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.
ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು.ಕಿಕ್ಕಿರಿದು ತುಂಬಿದ ಜನಸ್ತೋಮದ ಮುಂದೆ ಶಿವಾಜಿ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ದವ್ ಠಾಕ್ರೆ ಶಿವಾಜಿ ಮತ್ತು ದೇವರ ಹೆಸರಿನಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಅಭಿಮಾನಿಗಳ ಜಯದ ಉದ್ಘೋಷಗಳ ಶಬ್ದ ಪ್ರತಿಪಲಿಸುತ್ತಿತ್ತು.
ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ನೂತನ ಸಚಿವರಾಗಿ ಕಾಂಗ್ರೆಸ್ ಪಕ್ಷದ ಬಾಳಾ ಸಾಹೇಬ್ ಥೋರಟ್, ನಿತಿನ್ ರಾವತ್, ಎನ್ ಸಿಪಿಯ ಜಯಂತ್ ಪಾಟೀಲ್, ಛಗನ್ ಭುಜ್ ಬಲ್, ಶಿವಸೇನಾದ ಸುಭಾಶ್ ರಾಜಾರಾಮ್ ದೇಸಾಯಿ, ಏಕನಾಥ್ ಶಿಂಧೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಕೋಶ್ಯಾರಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಠಾಕ್ರೆ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಂಡರು.
ಠಾಕ್ರೆ ಸರ್ಕಾರ ಜಾರಿಗೆ ಬರುತ್ತಿದ್ದಂತೆಯೇ ಸಾಲಮನ್ನಾ ಮಾಡುವುದಾಗಿ ಘೋಷಿಸಿದೆ, ಆದರೆ ಅದು ಸುಲಭದ ಮಾತಲ್ಲ. ಇದರ ಜೊತೆಗೆ ಸರಕಾರ ಜನರಿಗೆ ಬರಪೂರ ಯೋಜನೆಯನ್ನು ನೀಡಿದೆ.
ಪ್ರಮುಖ ಘೋಷಣೆಗಳು ಹೀಗಿವೆ:-
-10 ರೂಪಾಯಿಗೆ ಗುಣಮಟ್ಟದ ಪೌಷ್ಠಿಕ ಆಹಾರ.
– ಅಕಾಲಿಕ ಮಳೆ ಮತ್ತು ಪ್ರವಾಹದಿಂದ ಬಳಲುತ್ತಿರುವ ರೈತರಿಗೆ ಶೀಘ್ರ ನೆರವಿನ ಭರವಸೆ.
– ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆಗೌರವಧನ ಹೆಚ್ಚಳ.
– ಆರ್ಥಿಕವಾಗಿ ದುರ್ಬಲರಾದ ಕೃಷಿ ಕಾರ್ಮಿಕರ ಮಕ್ಕಳಿಗೆ ಬಡ್ಡಿರಹಿತ ಶೈಕ್ಷಣಿಕ ಸಾಲ.
– ರೈತರಿಗೆ ಸಾಲ ಮನ್ನಾ ಯೋಜನೆ.
– ಸ್ಥಳೀಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಶೇ.80ರಷ್ಟು ಮೀಸಲಾತಿ. ಇದಕ್ಕಾಗಿ ಕಾನೂನು.
– ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತಶಿಕ್ಷಣ.
– ಒಂದು ರೂಪಾಯಿ ಕ್ಲಿನಿಕ್‌ಗಳ ಸ್ಥಾಪನೆ ಹಾಗೂ ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಆರೋಗ್ಯವಿಮೆ.
ಈ ಭರವಸೆ ಯೋಜನೆಗೆಳೆಲ್ಲಾ ಎಷ್ಟರಮಟ್ಟಿಗೆ ಜಾರಿಗೆ ತಂದುಯಶಸ್ವಿಗೊಳಿಸುತ್ತಾರೆ ಎಂಬುದು ಕಾದುನೋಡಬೇಕಾಗಿದೆ.