ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಿನ ಕಳೆದಂತೆ ವಾಯು ಗುಣಮಟ್ಟವು ತೀವ್ರ ಕುಸಿಯುತಿದ್ದು, ಇದೀಗ ಇದರ ಪರಿಣಾಮ ವಿಮಾನಯಾನ ಕ್ಕೂ ತಗುಲಿದೆ. ಪ್ರಸ್ತುತ ದೆಹಲಿ ಸ್ಥಿತಿ ಗಂಭೀರವಾಗಿದೆ. ದೆಹಲಿಯ ವಿವಿಧ ಭಾಗಗಳಲ್ಲಿ ಇಂದು ಮಳೆಯಾಗುವ ಮೂಲಕ ಶುದ್ಧ ಗಾಳಿಯ ಕೊರತೆ ಇನ್ನಷ್ಟು ಹೆಚ್ಚಾಗಿದೆ. ಇನ್ನು ದಟ್ಟ ಮಂಜು ಮತ್ತು ಸ್ಪಷ್ಟ ಗೋಚರತೆಯ ಕೊರತೆಯಿಂದಾಗಿ ಹಲವು ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.
ದೆಹಲಿ ರಸ್ತೆಗಳಲ್ಲೀಗ ಸಂಚರಿಸಿದರೆ ಮುಂದೆ ಯಾರು ಬರುತ್ತಿದ್ದಾರೆ ಎಂಬುದು ಸಹ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಎಲ್ಲೆಡೆ ದಟ್ಟ ಹೊಗೆ ತುಂಬಿಕೊಂಡಿದೆ. ಇದರಿಂದಾಗಿ ಸುಮಾರು 32 ವಿಮಾನಗಳ ಹಾರಾಟ ಮಾರ್ಗವನ್ನು ಬದಲಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಹಲವು ಭಾಗಗಳಲ್ಲಿ ಹೊಗೆಯ ತೆಳು ಪದರ ಆವರಿಸಿಕೊಂಡಿದ್ದು ಏನೂ ಕಾಣದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇಂದು ಮಧ್ಯಾಹ್ನದ ವೇಳೆಗೆ ದೆಹಲಿಯ ಹಲವು ಪ್ರದೇಶಗಳಲ್ಲಿ ಮತ್ತು ರಾಷ್ಟ್ರರಾಜಧಾನಿ ಭಾಗದಲ್ಲಿ ಮಾಲಿನ್ಯ ಸ್ಥಿತಿ 1600 ಅಂಕಗಳನ್ನು ದಾಟಿದ್ದು ಇದು ಗಂಭೀರ ಅಪಾಯದ ಸೂಚನೆಯಾಗಿದೆ.
ಜಹಾಂಗಿರಪುರಿಯಲ್ಲಿ ವಾಯು ಗುಣಮಟ್ಟ ಮಾಪನ 1690, ದೆಹಲಿ ವಿಮಾನ ನಿಲ್ದಾಣ ಪ್ರದೇಶದಲ್ಲಿ 1120, ಗುರ್ಗಾಂವ್ ನಲ್ಲಿ 990 ಮತ್ತು ನೋಯ್ಡಾದಲ್ಲಿ 1974 ವಾಯು ಗುಣಮಟ್ಟ ಮಾಪನ ದಾಖಲಾಗಿದೆ. ಅಕ್ಟೋಬರ್ ತಿಂಗಳನಲ್ಲಿ ಆಚರಿಸಿದ ದೀಪಾವಳಿ ಬಳಕ ದೆಹಲಿ ನಗರ ಪರಿಸರದಲ್ಲಿ ವಾಯು ಗುಣಮಟ್ಟ ತಳ ಕಂಡಿದ್ದು ಇದು ಕಳೆದ ಐದು ವರ್ಷಗಳಲ್ಲೇ ಅತೀ ಕಳಪೆ ಗುಣಮಟ್ಟವಾಗಿದೆ.
ಈ ವಿಚಾರದಲ್ಲಿ ಕೇಂದ್ರ ಸರಕಾರ ತಕ್ಷಣವೇ ಮಧ್ಯಪ್ರವೇಶಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ ಮತ್ತು ವಾಯು ಗುಣಮಟ್ಟ ಸುಧಾರಣೆಗೆ ಕೇಂದ್ರ ಸರಕಾರ ಯಾವ ಕ್ರಮ ಕೈಗೊಂಡರೂ ರಾಜ್ಯ ಸರಕಾರ ಬೆಂಬಲಿಸಲಿದೆ ಎಂದೂ ಸಹ ಕೇಜ್ರಿವಾಲ್ ಅವರು ಹೇಳಿದ್ದಾರೆ. ಬದಲಾಗುತ್ತಿರುವ ಹವಾಮಾನಕ್ಕೆ ದೆಹಲಿ ಜನರು ಹೈರಾಣಾಗಿದ್ದು , ಕೇಂದ್ರ ಸರ್ಕಾರ ಮತ್ತು ದೆಹಲಿ ರಾಜ್ಯ ಸರ್ಕಾರ ಏನ್ ಮಾಡುತ್ತಿದೆ ಎಂಬುದೇ ಪ್ರಶ್ನೆ ಯಾಗಿದೆ?!