ಕೆ.ಎಸ್.ಆರ್.ಟಿ.ಸಿ ನೌಕರರಿಗೆ ರಾಜ್ಯ ಸರ್ಕಾರ ದೀಪಾವಳಿಗೆ ಬಂಪರ್ ಗಿಫ್ಟ್

somashekhar
ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನವರು ನಿನ್ನೆಯಷ್ಟೇ ಬೆಳಗಾವಿಯಲ್ಲಿ ಮಾತನಾಡಿ, ರೈತರಿಗೆ 10000 ಬೆಳೆ ಹಾನಿ ಪರಿಹಾರ ಹಣ ನೀಡುವುದಾಗಿ ಘೋಷಿಸಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಇದೀಗ ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಬಂಪರ್ ಗಿಫ್ಟ್ ನೀಡಿದೆ. ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವ ಒತ್ತಾಯದ ಕೂಗು ಬಹು ದಿನಗಳಿಂದಿತ್ತು. ಈ ಕೂಗಿಗೆ ಇದೀಗ ರಾಜ್ಯ ಸರ್ಕಾರ ಟ ಕಿವಿಗೊಟ್ಟಿದೆ. ನಾಲ್ಕು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಸಂಬಂಧ ಸಾಧಕ-ಬಾಧಕ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ 8 ಸದಸ್ಯರೊಳಗೊಂಡ ಸಮಿತಿ ರಚಿಸಿದೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನೌಕರರು ಹಾಗೂ ಜನಪ್ರತಿನಿಧಿಗಳಿಂದ ಮನವಿಗಳು ಬಂದಿವೆ. ಹಾಗಾಗಿ ಸರ್ಕಾರಿ ನೌಕರರೆಂದು ಪರಿಗಣಿಸುವ ಕುರಿತು ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಶಿಫಾರಸುಗಳನ್ನು ವರದಿ ನೀಡುವಂತೆ ಈ ಸಮಿತಿಗೆ ಸೂಚಿಸಲಾಗಿದೆ. ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಈ ಸಮಿತಿಯ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೆಎಸ್‌ಆರ್‌ಟಿಸಿಯ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕರು ಇದ್ದಾರೆ.  ಕೆಎಸ್‌ಆರ್‌ಟಿಸಿಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಮುಖ್ಯ ಕಾನೂನಾಧಿಕಾರಿ ಸಹ ಸದಸ್ಯರಾಗಿದ್ದಾರೆ.


ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಸಮಿತಿಯ ಸಂಚಾಲಕರಾಗಿದ್ದಾರೆ. ಹತ್ತು ವರ್ಷಗಳಿಂದ ನಾಲ್ಕು ಸಾರಿಗೆ ನಿಗಮಗಳ ನೌಕರರು ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿಗಳನ್ನು ನೀಡಿದ್ದರು.  ಸಾರಿಗೆ ನೌಕರರು ಪ್ರತಿಭಟನೆ, ಧರಣಿ, ಪತ್ರ ಚಳವಳಿ ಹಾಗೂ ಸಹಿ ಸಂಗ್ರಹ ಅಭಿಯಾನದ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದರ ಜತೆಗೆ ಸಾರಿಗೆ ಸಚಿವರು, ಶಾಸಕರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗೆ ಹಲವು ಬಾರಿ ಮನವಿ ಮಾಡಿದ್ದರು. ಸರ್ಕಾರ ಸ್ಪಂದಿಸದಿದ್ದರೆ ಸೇವೆ ಸ್ಥಗಿತಗೊಳಿಸಿ ಮುಷ್ಕರಕ್ಕೆ ಇಳಿಯಲು ಸಿದ್ಧತೆಯಲ್ಲಿ ತೊಡಗಿದ್ದರು. ಇದರ ಬೆನ್ನಲೇ ರಾಜ್ಯ ಸರ್ಕಾರ ಬೇಡಿಕೆಯ ಸಾಧಕ-ಬಾಧಕ ಅಧ್ಯಯನ ಮಾಡಿ ವರದಿ ನೀಡಲು ಸಮಿತಿ ರಚಿಸಿದೆ.


Find Out More:

Related Articles: