ಎಪಿಎಂಸಿ ಕಾಯ್ದೆ ಬಂಡವಾಳ ಶಾಹಿಗಳ ಪರವಾಗಿವೆ'- ಶಾಸಕ ಡಾ.ಎಸ್.ಯತೀಂದ್ರ

Soma shekhar
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಇಡೀ ದೇಶದಾಧ್ಯಂತ ವಿರೋಧ ವ್ಯಕ್ತವಾಗಿದ್ದು ಸಾಕಷ್ಟು ಹೋರಾಟಗಳೂ ಕೂಡ ನಡೆಯುತ್ತಿದೆ. ಈ ಹೋರಾಟಗಳಿಗೆ ಹಲವು ರಾಜಕೀಯ ಪಕ್ಷಗಳು ಸಾಥ್ ನೀಡಿದ್ದಾರೆ. ಅದೇ ರೀತಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದ ಪ್ರತಿಭಟನೆಗೆ ಕಾಂಗ್ರೆಸ್ ಶಾಸಕ ಯತೀಂದ್ರ ಸಾಥ್ ನೀಡಿದ್ದಾರೆ. 

 

 


 

'ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭೂ ಸುಧಾರಣಾ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಗಳ ಮೂಲಕ ಜಾರಿ ಮಾಡಿ ರೈತರ ಮರಣ ಶಾಸನ ಬರೆಯಲು ಹೊರಟಿದ್ದಾರೆ. ಈ ಕಾಯ್ದೆಗಳು ಬಂಡವಾಳ ಶಾಹಿಗಳ ಪರವಾಗಿವೆ' ಎಂದು ಶಾಸಕ ಡಾ.ಎಸ್.ಯತೀಂದ್ರ ಹೇಳಿದರು.

ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಶುಕ್ರವಾರ ತಾಲ್ಲೂಕು ಕಾಂಗ್ರೆಸ್ ಆಯೋಜಿಸಿದ್ದ ರೈತರು ಮತ್ತು ಕಾರ್ಮಿಕರನ್ನು ಉಳಿಸಿಆಂದೋಲನದಲ್ಲಿ ಮಾತನಾಡಿದರು. 'ಕಾಯ್ದೆಯಿಂದ ಸಣ್ಣ ಹಿಡುವಳಿದಾರ ರೈತರು ಹಣದಾಸೆಗಾಗಿ ತಮ್ಮ ಜಮೀನನ್ನು ಬಂಡವಾಳ ಶಾಹಿಗಳಿಗೆ ಮಾರಿಕೊಂಡು, ಅವರ ಬಳಿಯೇ ಕೃಷಿ ಕೂಲಿಕಾರರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ' ಎಂದು ಆತಂಕ ವ್ಯಕ್ತಪಡಿಸಿದರು.
ಒತ್ತಾಯ: ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದವರಿಗೆ ಶಿಕ್ಷೆಯಾಗಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

'ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ತೆರಳುತ್ತಿದ್ದ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಅವರನ್ನು ಅಲ್ಲಿನ ಬಿಜೆಪಿ ಸರ್ಕಾರ ಪೊಲೀಸ್ ಬಲ ಉಪಯೋಗಿಸಿ ತಡೆಯುವ ಮೂಲಕ ಪ್ರತಿಭಟನೆ ಮಾಡುವ ಹಕ್ಕನ್ನು ಕಸಿದುಕೊಂಡು, ಫ್ಯಾಸಿಸ್ಟ್ ವರ್ತನೆ ತೋರಿದೆ. ಬಿಜೆಪಿ ಆಡಳಿತದಲ್ಲಿ ರೈತರು, ಕಾರ್ಮಿಕರು ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ' ಎಂದು ಹೇಳಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಕ್ಷೇತ್ರದ ಉಸ್ತೂವಾರಿ ಸೋಮೇಶ್ ಮಾತನಾಡಿದರು.  ಪ್ರತಿಭಟನೆಯಲ್ಲಿ ಜಿ.ಪಂ ಸದಸ್ಯೆ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶ್ರೀಕಂಠ ನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ತಗಡೂರು ಬ್ಲಾಕ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖಂಡರಾದ ಎಸ್.ಸಿ.ಬಸವರಾಜು, ಕೆ.ಮಾರುತಿ, ಕೆ.ಜಿ.ಮಹೇಶ್, ಅಕ್ಬರ್ ಅಲೀಂ, ಕಳಲೆ ರಾಜೇಶ್, ಯೋಗೇಶ್, ಬಿ.ಎಂ.ಮಹೇಶ್ ಕುಮಾರ್, ಸಿ.ಆರ್. ಮಹದೇವು, ಸಿದ್ದಶೆಟ್ಟಿ, ನಗರಸಭಾ ಸದಸ್ಯೆ ಗಾಯತ್ರಿ ಪಾಲ್ಗೊಂಡಿದ್ದರು.

Find Out More:

Related Articles: