ಶಾಲೆಗಳ ಆರಂಭದ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದೇನು..?

Soma shekhar
ಈ ಹಿಂದೆ ಪಾಲಕರಿಂದ ಶಾಲೆ ಆರಂಭದ ಬಗ್ಗೆ ಮಾಹಿತಿ ಪಡೆದಿದ್ದ ಸರ್ಕಾರ ಇದೀಗ ರಾಜ್ಯದಲ್ಲಿರುವ ಸಚಿವರು ಮತ್ತು ವಿಧಾನ ಸಭಾ ಸದಸ್ಯರಿಂದ ಅಭಿಪ್ರಾಯ ಸಂಗ್ರಹ ಮಾಡಲು ಮುಂದಾಗಿದೆ.  ಶಾಲೆ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಹಾಗೂ ಆರಂಭಿಸುವುದಾದರೇ ಏನೆಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂಬ ಮಾಹಿತಿ ಪಡೆಯಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರಾಜ್ಯದ ಎಲ್ಲ ಸಚಿವರು ಮ್ತು ವಿಧಾನ ಸಭಾ ಸದಸ್ಯರಿಗೆ ಪತ್ರ ಬರೆದಿದ್ದಾರೆ.


ಮುಂದಿನ ಎರಡು ದಿನಗಳಲ್ಲಿ ತಮ್ಮ ಸಲಹೆ-ಸೂಚನೆಗಳನ್ನು ಇ-ಮೇಲ್ ತಿಳಿಸುವಂತೆ ಕೋರಿದ್ದಾರೆ. ನಿಮ್ಮ ಸಲಹೆ-ಸೂಚನೆಗಳು ಶೈಕ್ಷಣಿಕವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ. ಶಿಕ್ಷಣ ಇಲಾಖೆಯು ಕರೊನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಪುನಾರಂಭಿಸಲು ಅವಶ್ಯಕವಿರುವ ಎಲ್ಲ ಪೂರ್ವ ಸಿದ್ಧತೆಗಳು ಹಾಗೂ ಪ್ರಮಾಣಿತ ಕಾರ್ಯಚರಣಾ ವಿಧಾನಗಳನ್ನು (ಎಸ್‌ಒಪಿ) ಸಿದ್ಧಪಡಿಸಲಾಗಿದೆ. ಮಾರ್ಗಸೂಚಿ ಜೊತೆಗೆ ತಮ್ಮ ಸಲಹೆಗಳನ್ನು ಆಧರಿಸಿ ಶಾಲೆಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.

ಕರೊನಾ ಕಾರಣದಿಂದ ಶಿಕ್ಷಣ ಇಲಾಖೆಯು ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಮಾರ್ಚ್‌ನಲ್ಲಿ ಸ್ಥಗಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಈವರೆಗೂ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಸಾಧ್ಯವಾಗಿಲ್ಲ. ಆದರೂ ರಾಜ್ಯದಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಇದೆ. ಈ ಪರಿಸ್ಥಿತಿಯ ನಡುವೆಯೂ ಸಾಮಾಜಿಕ ಜೀವನವು ಸಹಜ ಸ್ಥಿತಿಗೆ ಮರಳಬೇಕಿದೆ.


ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳು ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿದ್ದರೆ, ಸರ್ಕಾರಿ ಶಾಲೆಗಳು 'ವಿದ್ಯಾಗಮ' ಯೋಜನೆ ಅನುಷ್ಠಾನ ಮಾಡುತ್ತಿದೆ. ದೂರದರ್ಶನದ ಚಂದನ ವಾಹಿನಿ, ಶಿಕ್ಷಣ ಇಲಾಖೆಯ ಯೂ-ಟ್ಯೂಬ್ ಚಾನೆಲ್‌ಗಳ ಮೂಲಕ ಬೋಧನಾ ಚಟುವಟಿಕೆಗಳು ನಡೆಯುತ್ತಿವೆ. ಹಿಂದಿನ ತರಗತಿಗಳ ಬೋಧನೆಯನ್ನು ಪುನರ್ ಮನನ ಮಾಡುವ 'ಸೇತುಬಂಧ' ಕಾರ್ಯಕ್ರಮವನ್ನೂ ಸಹ ದೂರರ್ಶನದ ಮೂಲಕ ಪ್ರಸಾರ ಮಾಡಿ ಶಿಕ್ಷಕರಿಂದ ಪಾಲನೆ ಮಾಡಲಾಗುತ್ತಿದೆ. ಆದರೆ, ಈ ಎಲ್ಲ ಬೋಧನಾ ಕ್ರಮಗಳು ತರಗತಿ ಕಲಿಕೆಗೆ ಪರ್ಯಾಯವಲ್ಲ,
 ತರಗತಿಯ ನಾಲ್ಕು ಗೋಡೆಗಳ ನಡುವೆ ಸಹಪಾಠಿಗಳೊಂದಿಗೆ ಕುಳಿತು, ಬಯಲಿನಲ್ಲಿ ಆಟವಾಡಿ ಮನೆಗೆ ತೆರಳುವ ವಿದ್ಯಾರ್ಥಿಗಳು ಸಮಗ್ರ ಕಲಿಕೆಯ ಪ್ರಯೋಜನ ಪಡೆದಿರುತ್ತಾರೆ. ಆದ್ದರಿಂದ ಮತ್ತೆ ಮಕ್ಕಳನ್ನು ಶಾಲಾ ಆವರಣಕ್ಕೆ ಕರೆತರಬೇಕಾದ ಅನಿವಾರ್ಯತೆ ಇದೆ. ಆದರೆ, ಪ್ರಸ್ತುತ ಸಾಮಾಜಿಕ ಸಂದರ್ಭ ಇದಕ್ಕೆ ಅವಕಾಶ ನೀಡುತ್ತಿಲ್ಲ. ಮಕ್ಕಳು ಶಾಲೆಯಿಂದ ಹೊರಗುಳಿದಿರುವುದರಿಂದ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹೆಚ್ಚಳವಾಗುತ್ತಿವೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ತಮ್ಮ ಸಹಕಾರ ಬಯಸಿದ್ದೇನೆಂದು ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.

Find Out More:

Related Articles: