ಕೇಂದ್ರದ ಕೃಷಿ ಮಸೂದೆ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು..?

Soma shekhar
ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಎನ್ಡಿಎ ಮೈತ್ರಿ ಪಕ್ಷದ ಸಚಿವ ಹರ್ಸಿಮ್ರತ್ ಕೌರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ಇದೊಂದು ರೈತ ವಿರೋಧಿ ಮಸೂದೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿ, ಪ್ರತಿಭಟನೆ ನಡೆಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಈ ಮಸೂದೆ ಕುರಿತು ಮೌನ ಮುರಿದಿರುವ ಪ್ರಧಾನಿ, ರೈತರ ಹಿತಕಾಯುವ ಈ ಮಸೂದೆಯ ವಿರುದ್ಧ ದೇಶದ ಜನರಿಗೆ ತಪ್ಪು ಮಾಹಿತಿ ಹರಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಕುರಿತು ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಈ ಮಸೂದೆಯಿಂದಾಗಿ ರೈತರಿಗೆ ನ್ಯಾಯವಾದ ಬೆಲೆ ಸಿಗುವುದಿಲ್ಲ ಎಂಬ ತಪ್ಪು ಸಂದೇಶ ನೀಡಲಾಗುತ್ತಿದೆ. ದೇಶದ ರೈತರು ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ತಮ್ಮ ಮಿತ್ರಪಕ್ಷ ಅದರಲ್ಲಿ ಕಾಂಗ್ರೆಸ್ ನಾಯಕರಿಗೆ ಮಾತಿನಲ್ಲಿ ಚಾಟಿಬೀಸಿದ್ದಾರೆ. ಈ ಮಸೂದೆ ಜಾರಿಯಾದರೆ, ರೈತರಿಂದ ಅಕ್ಕಿ ಮತ್ತು ಗೋಧಿಯನ್ನು ಖರೀದಿಸಲಾಗುವುದಿಲ್ಲ ಎಂಬ ಸುಳ್ಳು ಹೇಳಲಾಗುತ್ತಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರಾವಾದದ್ದು. ಈ ಮೂಲಕ ರೈತರನ್ನು ಮೋಸಗೊಳಿಸುವ ಯತ್ನ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು


ಇದೇ ವೇಳೇ ದೇಶದ ರೈತರಿಗೆ ಮನವಿ ಮಾಡಿದ ಅವರು, ಕೃಷಿ ಮಸೂದೆ ಬಗ್ಗೆ ಸುಳ್ಳು ಹೇಳುತ್ತಿರುವವರ ಬಗ್ಗೆ ಎಚ್ಚರದಿಂದರಬೇಕು. ನಿಮ್ಮನ್ನು ತಪ್ಪಿ ದಾರಿಗೆ ಎಳೆದು ಪ್ರಚೋದಿಸುತ್ತಿರುವವರ ಬಗ್ಗೆ ಕೂಡ ಎಚ್ಚರಿಕೆಯಿಂದ ಇರಬೇಕು. ಹಳೆಯ ಪದ್ದತಿ ಮೂಲಕ ನಿಮ್ಮನ್ನು ಶೋಷಣೆ ಮಾಡುವುದು ಅವರ ಉದ್ದೇಶ. ದಶಕಗಳ ಕಾಲ ಆಡಳಿತದಲ್ಲಿದ್ದ ಅವರು ರೈತರ ಬಗ್ಗೆ ಅನೇಕ ಮಾತುಗಳನ್ನು ಆಡಿದ್ದಾರೆ. ಆದರೆ, ಅವರಿಗೆ ಏನು ಮಾಡಿಲ್ಲ ಎಂದು ಇದೇ ವೇಳೆ ಕುಟುಕಿದರು.
ಈ ಮಸೂದೆ ಮೂಲಕ ಕನಿಷ್ಟ ಬೆಂಬಲ ಬೆಲೆಯೊಂದಿಗೆ ಉತ್ತಮ ಬೆಲೆ ನೀಡಿ ರೈತರಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.


 
 ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಕೆಲವರು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ದ್ವೇಷ ಬಿತ್ತುವ ಕಾರ್ಯ ನಡೆಸುತ್ತಿದ್ದಾರೆ. ಇದನ್ನು ದೇಶದ ರೈತರು ಗಮನಿಸುತ್ತಿದ್ದಾರೆ. ಯಾರು ಮಧ್ಯವರ್ತಿಗಳಾಗಿ ಇದನ್ನು ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿದೆ ಎಂದರು.


 
 ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ ಪಂಜಾಬ್ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ನೀಡಲೇಬೇಕೆಂದು ಬಿಜೆಪಿ ವಿಪ್ ನೀಡಿದ ಹಿನ್ನಲೆ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಇದರ ಬಳಿಕ ಮಾತನಾಡಿದ ಬಾದಲ್, ಈ ಮಸೂದೆ ಕುರಿತು ಸಂಬಂಧಪಟ್ಟವರೊಂದಿಗೆ ಸಮಲೋಚನೆ ನಡೆಸಿ ಬಳಿಕ ತರಬೇಕು ಎಂದು ನಾನು ಹೇಳಿದೆ. ಈ ಮಸೂದೆಗೆ ಪಂಜಾಬ್ನಲ್ಲಿ ಮಾತ್ರವಲ್ಲ ಹರ್ಯಾಣ, ರಾಜಸ್ಥಾನ್, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ, ದಕ್ಷಿಣ ಭಾರತದಲ್ಲಿಯೂ ವಿರೋಧವಿದೆ ಎಂದರು.

Find Out More:

Related Articles: