ಅಮೆಜಾನ್ ಪ್ರೈಮ್ ನಲ್ಲಿ “ಲಾ” ಬಿಡುಗಡೆ: ಈ ಸಿನಿಮಾದ ಬಗ್ಗೆ ನಿರ್ದೇಶಕರು ಹೇಳಿದ್ದೇನು..?

Soma shekhar

ಕೊರೋನಾ ಕಾರಣದಿಂದ ಸಾಕಷ್ಟು ಸಿನಿಮಾಗಳು ಚಿತ್ರೀಕರಣದ ಹಂತದಲ್ಲೇ ನಿಂತು ಹೋಗಿದೆ ಇನ್ನು ಕೆಲವು ಚಿತ್ರೀಕರಣವೆಲ್ಲ ಮುಗಿದರೂ ಕೂಡ ರೀಲೀಸ್ ಆಗಲಿಕ್ಕೆ ಕಾಯುತ್ತಿವೆ.  ಆದರೆ ಇಂತ ಸಂದರ್ಭದಲ್ಲಿ ಪುನಿತ್ ರಾಜ್ ಕುಮಾರ್ ನಿರ್ಮಾಣದ  “ಲಾ” ಚಿತ್ರ ಒಟಿಟಿ ಮೂಲಕ ಬಿಡುಗಡೆಯಾಗಿದೆ.

ಹೌದು ಪುನಿತ್ ರಾಜ್ ಕುಮಾರ್ ಪ್ರೊಡಕ್ಷನ್ ನಲ್ಲಿ ಮೂಡಿ ಬಂದಿರುವ ಲಾ ಚಿತ್ರಕ್ಕೆ ರಘು ಸಮರ್ಥ ನಿರ್ದೇಶನವನ್ನು ಮಾಡಿದ್ದಾರೆ. ಈ ಮೊದಲು 'ಸ್ಮೈಲ್​ ಪ್ಲೀಸ್​' ಹೆಸರಿನ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಮಾಡಿದ್ದ ಅವರು, ಈಗ ಗಂಭೀರ ಕಥೆ ಹೇಳಲು ಹೊರಟಿದ್ದಾರೆ. ಅವರ ನಿರ್ದೇಶನದ 'ಲಾ' ಸಿನಿಮಾ ಇಂದು ಶುಕ್ರವಾರ (ಜು.17) ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿದೆ.


ಅಂದಹಾಗೆ, ಈ ಸಿನಿಮಾ ಮಾಡೋಕೆ ಕಥೆ ಹೊಳೆದುದ್ದು ಹೇಗೆ ಎನ್ನುವ ಬಗ್ಗೆ ಅವರು ಹೇಳೋದು ಹೀಗೆ. 'ನನಗೆ ಒಂದೇ ಮಾದರಿಯ ಸಿನಿಮಾ ಮಾಡಲು ಇಷ್ಟವಿಲ್ಲ. ಹೀಗಾಗಿ, ಹೊಸದೇನಾದರೂ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದೆ. ಈ ವೇಳೆ ಒಂದು ಕ್ರೈಮ್​ ಸುದ್ದಿ ಓದುವಾಗ ಲಾ ಸಿನಿಮಾ ಕಥೆ ಹೊಳೆಯಿತು. ಅದಕ್ಕೆ ಸಾಕಷ್ಟು ವಿಚಾರಗಳನ್ನು ಸೇರಿಸಿ ಸಿನಿಮಾ ಮಾಡಿದೆ,' ಎನ್ನುತ್ತಾರೆ ರಘು. ಈ ಸಿನಿಮಾ ಕಥೆಯಲ್ಲಿ ಸಾಕಷ್ಟು ಕಾನೂನಿನ ಅಂಶಗಳು ಬರುತ್ತವೆ. ಹೀಗಾಗಿ ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ ರಘು. 'ಈ ಸಿನಿಮಾ ಸಾಮಾನ್ಯ ಸಿನಿಮಾ ಮಾಡಿದಂತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ನಾನು ಕಥೆಗೆ ಸಂಬಂಧಿಸಿದಂತೆ ಸಾಕಷ್ಟು ಅಧ್ಯಯನ ನಡೆಸಿದ್ದೇನೆ. ಪೊಲೀಸರು, ನ್ಯಾಯಾಧೀಶರನ್ನು ಭೇಟಿ ಮಾಡಿ ಅವರ ಜೊತೆ ಚರ್ಚೆ ನಡೆಸಿದ್ದೇವೆ. ಈ ಮೂಲಕ ಕಥೆಗೆ ಸಂಪೂರ್ಣ ನ್ಯಾಯ ಒದಗಿಸಿದ್ದೇವೆ,' ಎನ್ನುತ್ತಾರೆ ರಘು.

ಪಿಆರ್​ಕೆ ಈ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸುವ ರಘು, 'ಪುನೀತ್​ ಅವರು ನನಗೆ ಮೊದಲಿನಿಂದಲೂ ಪರಿಚಯ. ಮಾಯಾಬಝಾರ್​ ಶೂಟಿಂಗ್​ ವೇಳೆ ಅವರಿಗೆ ಕಥೆ ಹೇಳಿದ್ದೆ. ತುಂಬಾನೇ ಇಷ್ಟಪಟ್ಟರು. ಅವರ ಬೆಂಬಲ ಇರುವುದಕ್ಕೆ ಸಿನಿಮಾ ಇಷ್ಟು ಉತ್ತಮವಾಗಿ ಮೂಡಿ ಬಂದಿದೆ,' ಎನ್ನುತ್ತಾರೆ ಅವರು.

ಕಥೆಯಲ್ಲೊಂದು ವಿಶೇಷತೆ ಇದೆ:

'ಹೆಣ್ಣು ಮಕ್ಕಳು ಮಾತನಾಡಬಾರದು, ಆಕೆ ಪ್ರಶ್ನೆ ಮಾಡಬಾರದು, ಆಕೆ ಗಂಡು ಹೇಳಿದ್ದನ್ನು ಕೇಳುತ್ತಾ ಇರಬೇಕು ಹೀಗೆ ಸಾಕಷ್ಟು ಕಟ್ಟಳೆಗಳು ಮೊದಲಿನಿಂದ ನಡೆದುಕೊಂಡು ಬಂದಿವೆ. ಈ ಕಟ್ಟಳೆಗಳನ್ನು ಸಿನಿಮಾದ ಕಥೆ ಪ್ರಶ್ನೆ ಮಾಡಲಿದೆಯಂತೆ. 'ಒಂದು ಹೆಣ್ಣು ಸಮಾಜದ ವಿರುದ್ಧ ತಿರುಗಿ ಬಿದ್ದರೆ ಏನೆಲ್ಲ ಆಗುತ್ತದೆ. ಹೀಗೆ ಸಮಾಜವನ್ನು ಪ್ರಶ್ನೆ ಮಾಡಲು ಆಕೆ ಹೇಗೆಲ್ಲ ಸಿದ್ಧತೆ ನಡೆಸುತ್ತಾಳೆ ಎನ್ನುವ ಕಥೆ ಸಿನಿಮಾದಲ್ಲಿದೆ. ಈ ಚಿತ್ರ ಸಾಕಷ್ಟು ಮನರಂಜನೆ ಜೊತೆಗೆ ಒಂದೊಳ್ಳೆಯ ಸಂದೇಶ ಕೂಡ ನೀಡಲಿದೆ,' ಎಂದರು ರಘು.

Find Out More:

Related Articles: