ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದಾ ಕಾಲ ಒಂದಿಲ್ಲೊಂದು ವಿಶೇಷತೆಗಳಿಗೆ ಸುದ್ದಿಯಾಗಿದ್ದ ಚಿತ್ರ ಎಂದರೇ ಅದು ಪಾಪ್ ಕಾರ್ನ್. ಹೌದು, ಸ್ಯಾಂಡಲ್ ವುಡ್ ನಲ್ಲಿ ಈ ಚಿತ್ರದ ಮೇಲೆ ಸಿನಿ ಪ್ರೇಕ್ಷಕರ ನಿರೀಕ್ಷೆಗಳೇ ಬೇರೆ ಇವೆ. ಹೌದು, “ದುನಿಯಾ’ ಸೂರಿ ನಿರ್ದೇಶನದ “ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಜೊತೆಯಲ್ಲಿ ಒಂದಷ್ಟು ಕುತೂಹಲವನ್ನೂ ಕೆರಳಿಸಿದೆ.
ಅದಕ್ಕೆ ಕಾರಣ, ಈಗಾಗಲೇ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್, ಟೀಸರ್. ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಗೆ ಕಾರಣವಾಗಿದ್ದ ಈ ಚಿತ್ರವನ್ನು ನಿರ್ದೇಶಕ ಸೂರಿ ಯಾವಾಗ ತೆರೆ ಮೇಲೆ ತರುತ್ತಾರೋ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಫೆಬ್ರವರಿ 21 ರಂದು ಅದ್ಧೂರಿಯಾಗಿ ಚಿತ್ರ ಬಿಡುಗಡೆಯಾಗಲಿದೆ. ಅಂದು ಮಹಾಶಿವರಾತ್ರಿ. ಹಬ್ಬದ ದಿನದಂದೇ ಧನಂಜಯನ ಅಬ್ಬರ ಶುರುವಾಗಲಿದೆ.
ಈಗಾಗಲೇ ಹೊರ ಬಂದ “ಮಾದೇವ’ ಹಾಗು ಟೀಸರ್‌ನಿಂದಾಗಿ ಚಿತ್ರ ಒಂದಷ್ಟು ನಿರೀಕ್ಷೆ ಹೆಚ್ಚಿಸಿರುವುದಂತೂ ನಿಜ. “ಟಗರು’ ಬಳಿಕ ಈ ಚಿತ್ರ ನಿರ್ದೇಶಿಸಿರುವ ಸೂರಿ, ಈ ಮೂಲಕ ಹೊಸ ಮೋಡಿ ಮಾಡಲಿದ್ದಾರೆ ಎಂಬ ನಂಬಿಕೆಯಂತೂ ಅವರ ಅಭಿಮಾನಿ ವರ್ಗಕ್ಕಿದೆ. ಈಗ ಚಿತ್ರತಂಡ ಬಿಡುಗಡೆಯ ದಿನಾಂಕ ಘೋಷಿಸಿರುವುದರಿಂದ ಅಭಿಮಾನಿಗಳಿಗಂತೂ ಇನ್ನಿಲ್ಲದ ಸಂತಸ ಹೆಚ್ಚಿರುವುದಂತೂ ಖಚಿತ ಆಗಿದೆ.
ಚಿತ್ರದಲ್ಲಿ ಧನಂಜಯ ಅವರ ಜೊತೆ ನಿವೇದಿತಾ, ಅಮೃತಾ ಐಯ್ಯಂಗಾರ್, ಸಪ್ತಮಿ, “ಕಾಕ್ರೋಚ್’ ಸುಧೀ, ಪೂರ್ಣಚಂದ್ರ ತೇಜಸ್ವಿ, ಮೌನೀಶ ನಾಡಿಗೇರ್ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಇನ್ನು, “ಟಗರು’ ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್, ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಶೇಖರ್ ಛಾಯಾಗ್ರಹಣವಿದೆ. ಸುಧೀರ್ ನಿರ್ಮಾಣವಿದ್ದು, ಸುಧೀರ್ ಮೋಹನ್ ಫಿಲಂಸ್ ಮತ್ತು ಪುಷ್ಕರ್ ಫಿಲಂಸ್ ಜಂಟಿ ವಿತರಣೆಯಲ್ಲಿ ಚಿತ್ರ ಬಿಡುಗಡೆ ಯಾಗಲಿದೆ. ಈಗಾಗಲೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಗಳಿದ್ದು, ಚಿತ್ರ ಅದ್ಯಾವಾಗ ಬಿಡುಗಡೆ ಯಾಗುತ್ತೋ, ಅದ್ಯಾವಾಗ ತೆರೆ ಮೇಲೆ ವೀಕ್ಷಿಸುತ್ತೇವೆಯೋ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಾ ಕುಳಿತಿದ್ದಾರೆ.