ಬೆಂಗಳೂರು: ಇತ್ತೀಚೆಗಷ್ಟೇ ಮದುವೆಯಾಗಿದ್ದ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಬಿಡುಗಡೆ ದಿನಾಂಕದ ಕುರಿತು ಬಹುತೇಕರಿಗೆ ಗೊಂದಲಗಳಿದ್ದವು. ಆದರೆ ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದೆ. ಪೊಗರು ಚಿತ್ರವು ಮಾರ್ಚ್ ತಿಂಗಳಲ್ಲಿ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಹೌದು, ಇದನ್ನು ಸ್ವತಃ ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ. ನಿರ್ದೇಶಕ ನಂದಕಿಶೋರ್ ಅವರು, ಸದ್ಯಕ್ಕೆ ಡಬ್ಬಿಂಗ್ನಲ್ಲಿ ಬಿಝಿಯಾಗಿದ್ದಾರೆ.
ಪೊಗರು ಚಿತ್ರದ ಮೊದಲರ್ಧ ಡಬ್ಬಿಂಗ್ ಮುಗಿದಿದ್ದು, ದ್ವಿತಿಯಾರ್ಧದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಈ ಕುರಿತು ಹೇಳುವ ಅವರು, “ಚಿತ್ರ ಬಿಡುಗಡೆಗೆ ರೆಡಿಯಾಗುತ್ತಿದೆ. ಫೆಬ್ರವರಿಯಲ್ಲಿ ಮೊದಲ ಕಾಪಿ ಬರಲಿದ್ದು, ಮಾರ್ಚ್ನಲ್ಲಿ ತೆರೆಗೆ ಬರಲಿದೆ. ಈ ಬಾರಿ ಧ್ರುವ ಸರ್ಜಾ ಅವರ ಅಭಿಮಾನಿಗಳು ಕಾಯುವಂತಿಲ್ಲ. ಮಾರ್ಚ್ನಲ್ಲಿ “ಪೊಗರು’ ನೋಡಲು ಯಾವುದೇ ಅಡ್ಡಿ ಇಲ್ಲ’ ಎಂದಿದ್ದಾರೆ. ಅಂದಹಾಗೆ, ನಂದಕಿಶೋರ್ ಅವರು ಈ ಚಿತ್ರದ ಬಳಿಕ ಮತ್ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ, “ಪುನಃ ಧ್ರುವಸರ್ಜಾ ಅವರೊಂದಿಗೆ ಒಂದು ದೊಡ್ಡ ಸಿನಿಮಾ ಮಾಡಲಿದ್ದೇನೆ ಇದು ಬಿಡುಗಡೆ ಬಳಿಕ ಅದು ಶುರುವಾಗಲಿದೆ. ಒಂದೊಂದೇ ಚಿತ್ರವನ್ನು ಮಾಡುತ್ತೇನೆ. ಮೊದಲು “ಪೊಗರು’ ರಿಲೀಸ್ ಮಾಡಿದ ನಂತರ ಆ ಬಗ್ಗೆ ಮಾಹಿತಿ ಕೊಡುತ್ತೇನೆ’ ಎಂದು ನಿರ್ದೇಶಕ ನಂದಕಿಶೋರ್ ಮತ್ತೇ ಕುತೂಹಲ ಹುಟ್ಟಿ ಸಿದ್ದಾರೆ.
ಸದ್ಯ ಪೊಗರು ಚಿತ್ರ ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಅದಕ್ಕೆ ಕಾರಣ, ಧ್ರುವ ಸರ್ಜಾ ಜೊತೆ ಕ್ಲೈಮ್ಯಾಕ್ಸ್ನಲ್ಲಿ ಸೆಣೆಸಾಡಿರುವ ಅಂತಾರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್. ಅದೊಂದೇ ಅಲ್ಲ, ಚಿತ್ರ ಪಕ್ಕಾ ಮಾಸ್ ಸಿನಿಮಾ ಎಂಬುದು ವಿಶೇಷ. ಚಿತ್ರದ ಆ್ಯಕ್ಷನ್ ದೃಶ್ಯಗಳನ್ನು ವಿಭಿನ್ನವಾಗಿ ಸೆರೆಹಿಡಿದಿರುವ ಚಿತ್ರತಂಡ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಾಯಕ ಧ್ರುವ ಸರ್ಜಾ ಅವರೊಂದಿಗೆ ಕಾದಾಡಲು ಅಂತರಾಷ್ಟ್ರೀಯ ಮಟ್ಟದ ಜನಪ್ರಿಯ ಬಾಡಿ ಬಿಲ್ಡರ್ಗಳಾದ ಮೋರ್ಗನ್ ಆಸ್ಟೆ, ಕೈಗ್ರೀನ್ , ಜಾನ್ ಲುಕಾಸ್, ಜೋಸ್ಥೆಟಿಕ್ಸ್ ಮೊದಲಾದ ಘಟಾನುಘಟಿಗಳು “ಪೊಗರು’ ಚಿತ್ರದ ಭರ್ಜರಿ ಕ್ಲೈಮ್ಯಾಕ್ಸ್ನಲ್ಲಿ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಧ್ರುವ ಸರ್ಜಾ ಇಲ್ಲಿ ಮೂರು ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.