ಆಕ್ಲೆಂಡ್: ನಗರದ ಈಡನ್ ಪಾರ್ಕ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪ್ರಮುಖ ಬ್ಯಾಟಿಂಗ್ ಆಟಗಾರರ ವೈಫಲ್ಯದಿಂದ ಪ್ರವಾಸಿ ಭಾರತ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಸುಲಭವಾಗಿ ಸೋಲಿಗೆ ಶರಣಾಯಿತು. ಈ ಮೂಲಕ ಏಕದಿನ ಸರಣಿಯನ್ನು ಕೈಚೆಲ್ಲಿತು. ಪಂದ್ಯದ ಕೊನೆಯವರೆಗೂ ಹೋರಾಟ ಮಾಡಿದ್ದು ಅದ್ಭುತವಾಗಿತ್ತು.
ಕಿವೀಸ್ ಪಡೆ ನೀಡಿದ್ದ 274 ರನ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಮಯಾಂಕ್ ಅಗರ್ವಾಲ್(3) ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ 24 ರನ್ ಗಳಿಸಿದ್ದ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರೆ, 15 ರನ್ ಗಳಿಸಿ ನಾಯಕ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಕೆ.ಎಲ್.ರಾಹುಲ್(4) ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದೇ ಟೀಂ ಇಂಡಿಯಾಗೆ ಮುಳುವಾಯಿತು. ಹೌದು, ಪ್ರಮುಖ ಬ್ಯಾಟ್ಸ್ ಮನ್ ಗಳ ಬ್ಯಾಕ್ ಟೂ ಬ್ಯಾಕ್ ವಿಕೆಟ್ ತಂಡದ ಸೋಲಿಗೆ ಕಾರಣವಾಯಿತು.
ತಂಡದ ಮೊತ್ತ 74 ರನ್ ಆಗಿದ್ದಾಗಲೇ ಟೀಮ್ ಇಂಡಿಯಾ ಪ್ರಮುಖ 4 ವಿಕೆಟ್ಗಳನ್ನು ಕಡೆದುಕೊಂಡು ಸೋಲಿನ ದವಡೆಗೆ ಸಿಲುಕಿತು. ಬಳಿಕ ಬಂದ ಕೇದರ್ ಜಾಧವ್(9) ಕೂಡ ಭರವಸೆ ಮೂಡಿಸಲಿಲ್ಲ. ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಶ್ರೇಯಸ್ ಅಯ್ಯರ್(52) ತಂಡದ ಮೊತ್ತವನ್ನು 100ರ ಗಡಿ ದಾಟಿಸಿ, ಅರ್ಧಶತಕ ದಾಖಲಿಸಿ ಹೊರ ನಡೆದರು. ಶಾರ್ದೂಲ್ ಠಾಕೂರ್(18) ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. ಕೊನೆಯಲ್ಲಿ ಟೀಮ್ ಇಂಡಿಯಾಕ್ಕೆ ಆಸರೆಯಾದ ರವೀಂದ್ರ ಜಡೇಜಾ ಮತ್ತು ನವದೀಪ್ ಸೈನಿ ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು 200 ಗಡಿ ದಾಟಿಸಿ ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು. ಈ ಹಂತದಲ್ಲಿ 45 ರನ್ ಗಳಿಸಿದ್ದ ನವದೀಪ್ ಸೈನಿ ಔಟಾದರೂ. ಜಡೇಜಾ 55 ರನ್ ಗಳಿಸಿದರು.
ಅಂತಿಮವಾಗಿ ಟೀಮ್ ಇಂಡಿಯಾ 48.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 251 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ 2-0 ಅಂತರದಿಂದ ಸರಣಿಯಲ್ಲಿ ಸೋಲುಂಡಿತು.