
ಜಾರ್ಜ್ ಫ್ಲಾಯ್ಡ್ ಸಾವಿನ ಬಳಿಕ ಎಚ್ಚೆತ್ತ ಅಮೇರಿಕಾ ಸರ್ಕಾರ: ಅಧ್ಯಕ್ಷ ಟ್ರಂಪ್ ರಿಂದ ಮಹತ್ವದ ಆದೇಶ..!!
ಸಾಕಷ್ಟು ದಿನಗಳಿಂದ ಅಮೇರಿಕಾದಲ್ಲಿ ತಲ್ಲಣವನ್ನು ಸೃಷ್ಟಿ ಮಾಡಿದ್ದ ಜಾರ್ಜ್ ಫ್ಲಾಯ್ಡ್ ಕೊಲೆ ಪ್ರಕರಣದಿಂದ ಇಡೀ ಅಮೇರಿಕಾದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಈ ಕೊಲೆ ವರ್ಣಭೇದ ನೀತಿಯನ್ನು ಸಾರುವಂತಿತ್ತು ಇದನ್ನು ವಿರೋಧಿಸಿ ಅಮೇರಿಕಾದ ನಾಗರೀಕರು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮಾಡಿ ಸರ್ಕಾರದ ನಿದ್ದೆಯನ್ನು ಗೆಡಿಸಿದ್ದರು. ಆದರೆ ಇದಕ್ಕೆ ಇತಿಶ್ರೀಯನ್ನು ಹಾಡುವ ಉದ್ದೇಶದಿಂದ ಅಮೇರಿಕಾದ ಪೊಲೀಸರ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಡೊನಾಲ್ಡ್ ಟ್ರಂಪ್ ಸರ್ಕಾರ ಚಿಂತಿಸಿದೆ.
ಹೌದು ಜಾರ್ಜ್ ಫ್ಲಾಯ್ಡ್ ಸಾವಿನ ಬಳಿಕ ದೇಶದಾದ್ಯಂತ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಪೊಲೀಸ್ ವ್ಯವಸ್ಥೆ ಸುಧಾರಣೆ ಕುರಿತ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದಾರೆ. ಆದರೆ ತೀರ್ವ ಚರ್ಚೆಗೆ ಗ್ರಾಸವಾಗಿರುವ ವರ್ಣಭೇದ ಹಾಗೂ ಜನಾಂಗೀಯ ದ್ವೇಷ ಕುರಿತಂತೆ ಯಾವುದೇ ಪ್ರಸ್ತಾಪವನ್ನು ಈ ಆದೇಶ ಒಳಗೊಂಡಿಲ್ಲ.
ಪೊಲೀಸ್ ದೌರ್ಜನ್ಯ ಹಾಗೂ ಜನಾಂಗೀಯ ದ್ವೇಷದಿಂದ ಉಂಟಾದ ಸಾಮೂಹಿಕ ಪ್ರತಿಭಟನೆಯನ್ನು ತಣಿಸಲು ರಿಪಬ್ಲಿಕನ್ನರು ಸಾಕಷ್ಟು ಯತ್ನಿಸಿದರು. ಆದರೆ ಟ್ರಂಪ್ ಅವರು ಪೊಲೀಸರ ಕಠಿಣ ನಡೆಯನ್ನು ಸಮರ್ಥಿಸಿಕೊಂಡು ತೀವ್ರ ಟೀಕೆಗೆ ಗುರಿಯಾದರು. ಫ್ಲಾಯ್ಡ್ ಸಾವಿನ ಬಳಿಕ ದೇಶದಲ್ಲಿ ಹಠಾತ್ತನೆ ಉಂಟಾದ ಪ್ರತಿಭಟನೆ ಹಾಗೂ ರಾಜಕೀಯ ಒತ್ತಡದಿಂದ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ವೇಗ ಸಿಕ್ಕಿತು.
ಅಧಿಕಾರವನ್ನು ಅತಿಯಾಗಿ ಪ್ರಯೋಗಿಸುವ ಪೊಲೀಸ್ ಅಧಿಕಾರಿಗಳ ಮೇಲೆ ನಿಗಾ ಇರಿಸುವ ಹಾಗೂ ಅವರ ಅಪರಾಧ ಕೃತ್ಯಗಳ ದಾಖಲೆ ಸಂಗ್ರಹಿಸುವ ಡೇಟಾಬೇಸ್ ನಿರ್ಮಾಣವಾಗಲಿದೆ ಎಂದು ಕಾರ್ಯಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಫ್ಲಾಯ್ಡ್ ಹತ್ಯೆಯ ಆರೋಪಿ, ಬಿಳಿವರ್ಣದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಸೇರಿದಂತೆ ಮಾರಣಾಂತಿಕ ದಾಳಿ ಎಸಗಿದ ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರಾವಾಧಿಯಲ್ಲಿ ಇಂತಹ ಕೃತ್ಯಗಳನ್ನು ಎಸಗಿದ ಅನೇಕ ಉದಾಹರಣೆಗಳಿವೆ. ಆದರೆ ಅವು ಸಾರ್ವಜನಿಕವಾಗಿ ಬಹಿರಂಗವಾಗುತ್ತಿರಲಿಲ್ಲ. ಅಧಿಕಾರಿ ವಿರುದ್ಧದ ಆರೋಪಗಳನ್ನು ತಿಳಿಯುವುದು ಕಷ್ಟ. ಟ್ರಂಪ್ ಹೊರಡಿಸಿರುವ ಹೊಸ ಆದೇಶದಲ್ಲಿ ಪೊಲೀಸ್ ಅಧಿಕಾರಿಗಳ ಅಪರಾಧ ಚರಿತ್ರೆಯನ್ನು ಜನರು ತಿಳಿದುಕೊಳ್ಳಬಹುದು.
ಪೊಲೀಸರಿಗೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಕಾರ್ಯಕ್ರಮಗಳನ್ನು ಆಯೋಜಿಸಲು ಇಲಾಖೆಗೆ ಆರ್ಥಿಕ ನೆರವು ನೀಡುವುದಾಗಿ ಟ್ರಂಪ್ ಉಲ್ಲೇಖಿಸಿದ್ದಾರೆ. ಪೊಲೀಸ್ ಅಧಿಕಾರಿಯ ಜೀವಕ್ಕೆ ಅಪಾಯ ಇರುವ ಸಂದರ್ಭಗಳನ್ನು ಹೊರತುಪಡಿಸಿ, 'ವ್ಯಕ್ತಿಯ ಕುತ್ತಿಗೆಯನ್ನು ಕಾಲಿನಿಂದ ನೆಲಕ್ಕೆ ಒತ್ತಿ ಇರಿಸಿಕೊಳ್ಳುವ ವಿಧಾನ'ಕ್ಕೆ (ಚೋಕ್‌ಹೋಲ್ಸ್ಡ್) ನಿಷೇಧ ಹೇರುವ ಮಹತ್ವದ ಪ್ರಸ್ತಾಪವನ್ನು ಆದೇಶ ಒಳಗೊಂಡಿದೆ.
ಪೊಲೀಸ್ ದೌರ್ಜನ್ಯ ಹಾಗೂ ಜನಾಂಗೀಯ ದ್ವೇಷ ಘಟನೆಗಳನ್ನು ಹತ್ತಿಕ್ಕುವ ಅಗತ್ಯ ಯೋಜನೆಗಳನ್ನು ಹೊಸ ಆದೇಶ ಒಳಗೊಂಡಿಲ್ಲ ಎಂದು ಡೆಮಾಕ್ರಟಿಕ್ ಪಕ್ಷ ಆರೋಪಿಸಿದೆ.